ಸೋಂಕು ಏರಿಕೆ ಆಸ್ಪತ್ರೆಗೆ ದಾಖಲಾಗುವರ ಸಂಖ್ಯೆ ಇಳಿಕೆ


ಬೆಂಗಳೂರು,ಜ.೧೪- ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತ ಸಾಗುತ್ತಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಮಾತ್ರ ಕಡಿಮೆಯಾಗಿರುವುದು ತುಸು ನಿರಾಳವೆನಿಸಿದೆ.
ಕೊರೊನಾ ಮೊದಲ ಅಲೆ ಮತ್ತು ೨ನೇ ಅಲೆಗೆ ಹೋಲಿಸಿದರೆ ೩ನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ತೀರಾ ಕಡಿಮೆ. ರಾಜ್ಯದಲ್ಲಿ ನಿನ್ನೆ ಸುಮಾರು ೨೫ ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೂ ಆಸ್ಪತ್ರೆಗೆ ದಾಖಲಾಗಿರುವವರ ಸಂಖ್ಯೆ ಶೇ. ೬ರಷ್ಟು ಮಾತ್ರ. ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಮಾತ್ರ ಶೇ. ೧ ರಷ್ಟು ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಶೇ. ೯೩ ರಷ್ಟು ಸೋಂಕಿತರು ಮನೆಯಲ್ಲೇ ಐಸೋಲೇಷನ್‌ಗೆ ಒಳಗಾಗಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಕ್ಯೆ ೧,೧೫,೦೦೦ದಷ್ಟಿದ್ದರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದ್ದು, ಕೊರೊನಾ ಸೋಂಕಿನ ತೀವ್ರತೆ ೨ನೇ ಅಲೆಯಲ್ಲಿ ಇದ್ದಷ್ಟು ಇಲ್ಲ. ಸೋಂಕು ಸೌಮ್ಯ ಸ್ವಭಾವ ಹೊಂದಿದೆ.
ಕೊರೊನಾ ಸೋಂಕಿನ ಹರಡುವಿಕೆ ಹೆಚ್ಚಿದೆ. ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆ. ಒಟ್ಟು ಸೋಂಕಿತರಲ್ಲಿ ಶೇ. ೬ ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಜ್ಯದ ಬೇರೆಡೆಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸೋಂಕು ಹೆಚ್ಚಿದೆ. ಬೇರೆ ಜಿಲ್ಲೆಗಳಲ್ಲೂ ನಿಧಾನವಾಗಿ ಏರಿಕೆಯಾಗುತ್ತಿದೆ.
ರಾಜ್ಯದಲ್ಲಿ ೨ನೇ ಅಲೆ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ೨೦೨೧-ಏಪ್ರಿಲ್ ೩ನೇ ವಾರದಲ್ಲಿ ರಾಜ್ಯದಲ್ಲಿ ೧,೨೭,೭೬೨ ಸಕ್ರಿಯ ಪ್ರಕರಣಗಳಿದ್ದವು. ಆಗ ಶೇ. ೩೦ ರಷ್ಟು ಕೊರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದರು. ಶೇ. ೬ರಷ್ಟು ಮಂದಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ದಾಖಲಾಗಿದ್ದರೆ, ಶೇ. ೬೪ ರಷ್ಟು ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆದಿದ್ದರು.
೨ನೇ ಅಲೆಯಲ್ಲಿ ಕೊರೊನಾ ಗರಿಷ್ಠ ಮಟ್ಟಕ್ಕೆ ತಲುಪಿ ಸಕ್ರಿಯ ಪ್ರಕರಣಗಳ ಸಂಖ್ಯೆ ೩,೧೦,೨೬೩ ರಷ್ಟಿದ್ದ ಮೇ ೨ನೇ ವಾರದಲ್ಲಿ ಆಸ್ಪತ್ರೆಗೆ ಶೇ. ೨೨ರಷ್ಟು ರೋಗಿಗಳು ದಾಖಲಾಗಿದ್ದರೆ, ಕೋವಿಡ್‌ಕೇರ್ ಸಎಂಟರ್‌ಗೆ ಶೇ. ೫ರಷ್ಟು ಮಂದಿ ದಾಖಲಾಗಿ, ಶೇ. ೭೪ ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆದಿದ್ದರು. ಕಳೆದ ಡಿಸೆಂಬರ್ ಮೊದಲ ವಾರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೩,೧೫೧ ಇತ್ತು. ಆಗ ಶೇ. ೨೩ರಷ್ಟು ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ಹಾಗೆಯೇ ಶೇ. ೩ರಷ್ಟು ಮಂದಿ ಕೋವಿಡ್‌ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆದಿದ್ದರೆ, ಉಳಿದ ಶೇ. ೭೪ ರಷ್ಟು ಮಂದಿ ಮನೆಯಲ್ಲೇ ಐಸೋಲೇಷನ್ ಆಗಿದ್ದರು. ಈ ವರ್ಷದ ಜನವರಿ ೧ ರಿಂದ ಇಲ್ಲಿಯವರೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ೧ ಲಕ್ಷ ೧೫ ಸಾವಿರದಷ್ಟಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯನ್ನು ಶೇ. ೬ನ್ನು ದಾಟಿಲ್ಲ. ಹಾಗಾಗಿ, ಸೋಂಕು ಅಷ್ಟು ಗಂಭೀರ ಸ್ವರೂಪದಲ್ಲಿ ಕಾಣಿಸಿಕೊಂಡಿಲ್ಲ. ಹರಡುವಿಕೆ ವೇಗ ಮಾತ್ರ ಹೆಚ್ಚಿದೆ. ಆದರೆ, ಮುಂದೆ ಸೋಂಕು ಯಾವ ಸ್ವರೂಪ ಪಡೆಯುತ್ತದೋ ಗೊತ್ತಿಲ್ಲ. ಸೋಂಕು ಗಂಭೀರ ಸ್ವರೂಪ ಪಡೆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಬಹುದು. ಒಂದು ವೇಳೆ ಸೋಂಕಿನ ತೀವ್ರತೆ ಸೌಮ್ಯವಾಗಿದ್ದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇರಲಿದೆ.
೧ ಮತ್ತು ೨ನೇ ಅಲೆಗೆ ಹೋಲಿಸಿದರೆ ಸೋಂಕು ಹರಡುವಿಕೆ ೩ನೇ ಅಲೆಯಲ್ಲಿ ಮೂರೇ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಮೊದಲ ಅಲೆಯಲ್ಲಿ ಸೋಂಕು ದುಪ್ಪಟ್ಟಾಗಲು ೭ ರಿಂದ ೧೩ ದಿನ ಹಿಡಿದಿತ್ತು. ೨ನೇ ಅಲೆಂiiಲ್ಲೂ ಸೋಂಕು ದುಪ್ಪಟ್ಟಾಗಲು ೮ ರಿಂದ ೧೦ ದಿನಗಳ ಕಾಲ ಬೇಕಾಗಿತ್ತು. ಈಗ ಮಾತ್ರ ಸೋಂಕು ಮೂರು ದಿನಕ್ಕೆ ದುಪ್ಪಟ್ಟಾಗುತ್ತಿದೆ. ಹಾಗಾಗಿ, ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಫೆಬ್ರವರಿ ಕೊನೆ ವಾರದಲ್ಲಿ ಸೋಂಕು ಇಳಿಮುಖವಾಗಿರುವ ಸಾಧ್ಯತೆಯನ್ನು ತಜ್ಞರು ವ್ಯಕ್ತಪಡಿಸಿದ್ದರು, ಅಲ್ಲಿಯವರೆಗೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸೋಂಕಿನಿಂದ ರಕ್ಷಣೆ ಪಡೆಯುವುದು ಸೂಕ್ತ.