ಸೋಂಕು ಉಲ್ಬಣ: ನಾಳೆ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ನವದೆಹಲಿ ಏ .22-ದೇಶದಲ್ಲಿ ಕೊರೋನಾ ಉಲ್ಬಣ ಗೊಂಡಿರುವ ಬೆನ್ನಲ್ಲೇ ಹೆಚ್ಚುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಳೆ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.

ಉನ್ನತ ಮಟ್ಟದ ಸಭೆ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳ ಪ್ರವಾಸ ರದ್ದು ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಏ. 30ರಂದು ಕೊನೆಯ ಹಂತದ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ನಾಳೆ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿ ಅವರು ತೆರಳಬೇಕಿತ್ತು. ಆದರೆ, ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನಕ್ಕೆ ಮೂರು ಲಕ್ಷ ದಾಟುತ್ತಿರುವ ಹಿನ್ನೆಲೆಯಲ್ಲಿ ನಾಳೆ ದಿಢೀರ್ ಉನ್ನತ ಮಟ್ಟದ ಸಭೆ ಕರೆದಿರುವುದು ಕುತೂಹಲ ಕೆರಳಿಸಿದೆ.

ಸಭೆಯಲ್ಲಿ ಕೋವಿಡ್ ಪರಿಸ್ಥಿತಿಯ ಪರಾಮರ್ಶೆ ನಡೆಸಲಾಗುತ್ತದೆ. ಕೊರೋನಾ ಲಸಿಕೆ, ಆಕ್ಸಿಜನ್, ರೆಮಿಡೆಸಿವಿರ್ ಉತ್ಪಾದನೆ ಮತ್ತು ವಿತರಣೆಯ ಬಗ್ಗೆ ಪರಾಮರ್ಶೆ ಹಾಗೂ ಸೋಂಕು ಹರಡುವಿಕೆ ತಡೆಯುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ. ಮಾರಕ ಸೋಂಕು ನಿಯಂತ್ರಣಕ್ಕೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ.

ಸಭೆಯ ಬಳಿಕ ಪ್ರಧಾನಿ ಮೋದಿ ಅವರು ಮತ್ತೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆ ಇದೆ. ಈ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ.