ಸೋಂಕು ಇಳಿಕೆ ಸಾವು ಏರಿಕೆ

ನವದೆಹಲಿ,ಜು.೨೫- ದೇಶದಲ್ಲಿ ಕಳೆದ ಒಂದು ವಾರದಿಂದ ೨೦ ಸಾವಿರಕ್ಕೂ ಅಧಿಕ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿತ್ತು ಇಂದು ಸರಿ ಸುಮಾರು ೧೭ ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ಸಾವಿನ ಸಂಖ್ಯೆ ಏರಿಕೆಯಾಗಿದೆ.
ಕಳೆದ ೨೪ ಗಂಟೆಗಳಲ್ಲಿ ೧೬,೮೬೬ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ೪೧ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.ಜೊತೆಗೆ ಇದೇ ಅವಧಿಯಲ್ಲಿ ೧೮,೧೪೮ ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದಿನದ ಸೋಂಕು ಸಂಖ್ಯೆ ಏರಿಳಿತವಾಗುತ್ತಿರುವ ನಡುವೆ ದಿನದ ಪಾಸಿಟಿವಿಟಿ ಪ್ರಮಾಣ ಶೇ.೭.೦೩ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ೧,೫೦,೮೭೭ ಮಂದಿಗೆ ಏರಿಕೆಯಾಗಿದೆ.
ಹೊಸದಾಗಿ ಕಾಣಿಸಿಕೊಂಡ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ ೪,೩೭ ಕೋಟಿಗೂ ಅಧಿಕವಾಗಿದ್ದು ಸೋಂಕಿನಿಂದ ಇಲ್ಲಿಯ ತನಕ ಚೇತರಿಸಿಕೊಂಡು ಬಿಡುಗಡೆಯಾದವರ ಸಂಖ್ಯೆ ೪,೩೨,೨೨,೮೬,೭೦ಕ್ಕೆ ಹೆಚ್ಚಳವಾಗಿದೆ. ಜೊತೆಗೆ ಇದೇ ಅವಧಿಯಲ್ಲಿ ೫,೨೬,೦೭೪ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ದಿನದ ಪಾಸಿಟಿವಿಟಿ ಪ್ರಮಾಣ ಶೇ.೭.೦೩ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ಶೇ.೪.೪೯ ರಷ್ಟು ಇದೆ. ಅಲ್ಲದೆ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇ.೦.೩೪ ರಷ್ಟು ಇದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨,೩೯,೭೫೧ ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಇಲ್ಲಿಯ ತನಕ ೮೭.೨೭ ಕೋಟಿ ಜನರಿಗೆ ಪರೀಕ್ಷೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ
ಸೋಂಕು ನಿತ್ಯ ಏರಿಳಿತವಾಗುತ್ತಿರುವ ಹಿನ್ನೆಲೆಯಲ್ಲಿ ಚೇತರಿಕೆ ಪ್ರಮಾಣ ಶೇ.೯೮.೪೬ಕ್ಕೆ ಇಳಿಕೆಯಾಗಿದೆ.