ಸೋಂಕಿನ ಸುನಾಮಿ ಸೃಷ್ಟಿಸಿದ 2ನೇ ಅಲೆ

ನವದೆಹಲಿ,ಏ.೧೫- ಕೊರೊನಾದಿಂದ ಜನರನ್ನು ಪಾರು ಮಾಡಲು ಲಸಿಕೆ ಹಾಕುವ ಕಾರ್ಯವನ್ನು ಸರ್ಕಾರ ಚುರುಕುಗೊಳಿಸಿರುವ ಮಧ್ಯೆ ಸೋಂಕಿತರ ಸಂಖ್ಯೆ ದಿನ, ದಿನಕ್ಕೂ ಉಲ್ಬಣಗೊಂಡು ದೇಶದಾದ್ಯಂತ ತಳಮಳ ವಾತಾವರಣ ಸೃಷ್ಪಿಯಾಗಿದೆ.
ಕಳೆದ ವರ್ಷ ಕಾಣಿಸಿಕೊಂಡ ಸೋಂಕು ಮತ್ತೇ ಈಗ ೨ನೇ ಅಲೆ ಅಪ್ಪಳಿಸಿದ ನಂತರ ಒಂದೇ ದಿನ ೨ ಲಕ್ಮಕ್ಕೂ ಹೆಚ್ಚು ಮಂದಿ ಸೋಂಕಿಗೆ ಗುರಿಯಾಗಿ ಬಳಲುವಂತಾಗಿದೆ. ಸಾವಿನ ಸಂಖ್ಯೆ ಅಧಿಕವಾಗಿರುವುದು ಕಳವಳಕಾರಿಯಾಗಿದೆ.
ಎರಡನೇ ಅಲೆ ಶರವೇಗದಲ್ಲಿ ವ್ಯಾಪಿಸುತ್ತಿರುವುದು ದಿಗ್ಬ್ರಮೆಗೊಳಿಸಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಇಡೀ ದೇಶ ಸೋಂಕಿತರಿಂದ ನರಳುವಂತಾಗಲಿದೆ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ದಿಗ್ಬ್ರಮೆಗೊಳ್ಳುವಂತಾಗಿದೆ.
ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೨,೦೦,೭೩೯ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ೧೦೩೮ ಮಂದಿ ಸೋಂಕಿನಿಂದ ಸಾವನ್ನಪ್ಪುವ ಮೂಲಕ ಮತ್ತೊಮ್ಮೆ ಸಾವಿನ ಸಂಖ್ಯೆ ೧ ಸಾವಿರ ಗಡಿ ದಾಟಿದೆ. ೯೩,೫೨೮ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಬೆಳಗ್ಗೆ ೮ ಗಂಟೆಯವರೆಗೆ ದಾಖಲಾದ ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೧,೪೦,೭೪,೫೬೪ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ೧,೨೪,೨೯,೫೬೪ ಮಂದಿ ಆಸ್ಪತ್ರೆಯಿಂದ ಚೇತರಿಸಿಕೊಂಡಿದ್ದಾರೆ. ಜೊತೆಗೆ ಇಲ್ಲಿಯವರೆಗೆ ೧,೭೩,೧೨೩ ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ಪಂಜಾಬ್, ಹರಿಯಾಣ, ಛತ್ತೀಸ್‌ಗಡ, ಚಂಡಿಗಡ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಮಧ್ಯಪ್ರದೇಶ, ಒರಿಸ್ಸಾ, ಉತ್ತರ ಪ್ರದೇಶ, ಉತ್ತರಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಿತ್ಯ ಕೊರೊನಾ ಸೋಂಕು ಪ್ರಕರಣ ದಿನದಿಂದ ದಿನಕ್ಕೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ನಿಧಾನವಾಗಿ ಏರಿಕೆಯಾಗತೊಡಗಿದ ಎರಡನೇ ಹಂತದ ಸೋಂಕಿನ ಅಲೆ ದೇಶಾದ್ಯಂತ ರಾಕೆಟ್ ವೇಗದಲ್ಲಿ ಪ್ರಸರಣ ಹೆಚ್ಚು ಮಾಡುತ್ತಿದೆ, ಇದು ಸಹಜವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಜೊತೆಗೆ ಜನರನ್ನು ಆತಂಕಕ್ಕೆ ಸಿಲುಕಿಸಿದೆ.

೧೫ ಲಕ್ಷ ಸಮೀಪಕ್ಕೆ:
ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೧೫ ಲಕ್ಷ ಹಾಜು ಬಾಜಿಗೆ ಬಂದು ನಿಂತಿದೆ. ಅಷ್ಟೇ ಅಲ್ಲ ಇದರ ಸಂಖ್ಯೆ ನಿತ್ಯ ಶರವೇಗದಲ್ಲಿ ಹೆಚ್ಚಾಗುತ್ತಿದೆ.
ಕಳೆದ ಎರಡು ತಿಂಗಳಲ್ಲಿ ಸರಿ ಸುಮಾರು ೧೩ ಲಕ್ಷ ಮಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರ ಅದರಲ್ಲಿಯೂ ಸೋಂಕು ಹೆಚ್ಚುತ್ತಿರುವ ಮಹಾರಾಷ್ಟ್ರ, ಕರ್ನಾಟಕ, ದೆಹಲಿ ಸೇರಿದಂತೆ ಮತ್ತಿತರ ರಾಜ್ಯಗಳ ಸರ್ಕಾರವನ್ನು ನಿದ್ದೆಗೆಡಿಸುವಂತೆ ಮಾಡಿದೆ.

೧೧.೪೪ ಕೋಟಿಗೆ ಲಸಿಕೆ
ದೇಶದಲ್ಲಿ ಒಂದು ಕಡೆ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಮತ್ತೊಂದು ಕಡೆ ಲಸಿಕೆ ಹಾಕುವ ಕಾರ್ಯವೂ ನಡೆದಿದೆ. ಆದರೆ ಸೋಂಕು ಹೆಚ್ಚಾಗುತ್ತಿರುವ ವೇಗದಲ್ಲಿ ಲಸಿಕೆ ಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ.
ನಿನ್ನೆ ಸಂಜೆವರೆಗೆ ದೇಶದಲ್ಲಿ ೧೧,೪೪,೯೩,೨೩೮ ಮಂದಿಗೆ ಕೊರೊನಾ ಸೋಂಕಿನ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ವಿಶ್ವದಲ್ಲಿ ಅಧಿಕ
ಏಪ್ರಿಲ್ ೨ರ ಬಳಿಕ ವಿಶ್ವದಲ್ಲಿ ಅತಿ ಹೆಚ್ಚಿನ ಮಂದಿಗೆ ಸೋಂಕು ಭಾರತದಲ್ಲಿ ಏರಿಕೆಯಾಗಿದ್ದು ಅತಿ ಹೆಚ್ಚು ಬಾಧಿತ ದೇಶವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ತಿಂಗಳಲ್ಲಿ ಹಲವು ಬಾರಿ ೧ ಲಕ್ಷ ಗಡಿ ದಾಟಿದ್ದ ಸೋಂಕು ಇದೇ ಮೊದಲ ಬಾರಿಗೆ ಎರಡು ಲಕ್ಷ ಗಡಿ ದಾಟಿದೆ. ಆದರೂ ಕೇಂದ್ರ ಸರ್ಕಾರ ಯಾವುದೇ ಬಿಗಿ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.