ಸೋಂಕಿನ ಸಾವು- ಭಾರತ ದಾಖಲೆ

ನವದೆಹಲಿ,ಮೇ ೧೯-ದೇಶದಲ್ಲಿ ಸತತ ಮೂರನೇ ದಿನವೂ ೩ ಲಕ್ಷಕ್ಕಿಂತ ಕಡಿಮೆ ಕೊರೊನಾ ಸೋಂಕಿನ ಸಂಖ್ಯೆ ದಾಖಲಾಗುತ್ತಿದ್ದ ಒಂದು ವಾರಕ್ಕೂ ಹೆಚ್ಚು ದಿನಗಳಿಂದ ಸೋಂಕಿನಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ದಾಖಲೆ ಬರೆಯುತ್ತಿದೆ.
ಕಳೆದ ೨೪ ಗಂಟೆಗಳಲ್ಲಿ ೪,೫೨೯ ಮಂದಿ ಸೋಂಕಿತರು ಸಾವನ್ನಪ್ಪಿದ್ದು ಒಂದೇ ದಿನ ಹೆಚ್ಚು ಮಂದಿ ಸಾವನ್ನಪ್ಪಿದ ದೇಶಗಳ ಪೈಕಿ ಭಾರತ ಮುಂಚೂಣಿಯ ಸ್ಥಾನ ಪಡೆದಿದೆ. ಕಳೆದ ವಾರದಿಂದ ದೇಶದಲ್ಲಿ ನಿತ್ಯ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ನಿತ್ಯ ಹೆಚ್ಚು ಜನರನ್ನು ಬಲಿ ಪಡೆಯುತ್ತಿದೆ.ಇದುವರೆಗೆ ಇಂದೇ ದಿನ ಸಾವನ್ನಪ್ಪಿದವ ಸಂಖ್ಯೆಯಲ್ಲಿ ಇದು ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದೆ.
ಇಂದು ಬೆಳಗ್ಗೆ ೮ ಗಂಟೆಯವರೆಗೆ ಸಾವನ್ನಪ್ಪಿದವರೂ ಸೇರಿದಂತೆ ದೇಶದಲ್ಲಿ ಸೋಂಕಿನಿಂದ ಇದುವರೆಗೆ ೨,೮೩,೨೪೮ ಮಂದಿ ಮೃತಪಟ್ಟಿದ್ದಾರೆ. ಹೊಸದಾಗಿ ೨,೬೭,೩೩೪ ಮಂದಿಗೆ ಸೋಂಕು ತಗುಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ
ನಿನ್ನೆ ೪ ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿತರು ಚೇತರಿಸಿಕೊಂಡಿದ್ದರು. ಈ ಸಂಖ್ಯೆ ಇಂದು ನಾಲ್ಕು ಲಕ್ಷಕ್ಕೈ ಕೆಳಗೆ ಇಳಿದಿದ್ದು ೩,೮೯,೮೫೧ ಮಂದಿ ಚೇತರಿಸಿಕೊಂಡಿದ್ದಾರೆ.
ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯವರೆಗೆ ದೇಶದಲ್ಲಿ ಒಟ್ಟಾರೆ ಸೋಂಕಿನ ಸಂಖ್ಯೆ ೨,೫೪,೯೬,೩೩೦ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಇಲ್ಲಿಯತನಕ ೨,೧೯,೮೬,೩೬೩ ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
೩೨.೨೬ ಲಕ್ಷ ಸಕ್ರಿಯ ಪ್ರಕರಣ
ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ನಿತ್ಯ ೩ ಲಕ್ಷದ ಒಳಗೆ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪಕ್ರರಣಗಳ ಸಂಖ್ಯೆ ೩೨.೨೬,೭೧೯ ಮಂದಿ ವಿವಿಧ ಆಸ್ಪತ್ರೆ ಮತ್ತು ಹೋಮ್ ಐಸಲೋಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶದಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚಿನ ಮಂದಿಗೆ ಸಕ್ರಿಯ ಪ್ರಕರಣಗಳಿದ್ದು ೫,೭೫ ಲಕ್ಷ ಸಕ್ರಿಯ ಪ್ರಕರಣಗಳಿವೆ. ಉಳಿದಂತೆ ಮಹಾರಾಷ್ಟ್ರ, ಆಂದ್ರ ಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ೮ ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚು ಇದೆ.

೧೮.೫೮ ಕೋಟಿಗೆ ಲಸಿಕೆ
ದೇಶದಲ್ಲಿ ಇದುವರೆಗೆ ೧೮,೫೮ ಕೋಟಿಗೂ ಅಧಿಕ ಮಂದಿಗೆ ಕೊರೊನಾ ಸೋಂಕಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ಪಡೆದವರು ಇದ್ದಾರೆ. ಇನ್ನೂ ಕೆಲವರು ಎರಡನೇ ಡೋಸ್ ಲಸಿಕೆ ಪಡೆಯಲು ಕಾಯುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

೩೨ ಕೋಟಿ ಮಂದಿಗೆ ಪರೀಕ್ಷೆ
ದೇಶದಲ್ಲಿ ನಿತ್ಯ ಕೊರೊನಾ ಸೋಂಕು ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಒಂದೇ ದಿನ ೨೦,೦೮,೨೯೬ ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ ೨,೬೭ ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಂಡಿದೆ.
ದೇಶದಲ್ಲಿ ಇದುವರೆಗೆ ೩೨,೦೩,೦೧,೧೭೭ ಮಂದಿಗೆ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ-ಐಸಿಎಂಆರ್ ತಿಳಿಸಿದೆ.