ಸೋಂಕಿನ ಭೀತಿ ಮಧ್ಯೆ ಲಸಿಕೆ ನಿರೀಕ್ಷೆ


ನವದೆಹಲಿ ನ. ೨೦- ಬರುವ ಫೆಬ್ರವರಿ ವೇಳೆಗೆ ಮಹಾಮಾರಿ ಕೊರೊನಾ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂಬ ಆತಂಕದ ನಡುವೆಯೇ, ಸಾಂಕ್ರಾಮಿಕ ರೋಗ ನಿಗ್ರಹಕ್ಕೆ, ಆಕ್ಸ್ಫರ್ಡ್ ಕೋವಿಡ್ ೧೯ ಲಸಿಕೆ, ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಆರೋಗ್ಯ ಕಾರ್ಯಕರ್ತರು ಮತ್ತು ಹಿರಿಯ ನಾಗರಿಕರಿಗೆ ಲಭ್ಯವಾಗಲಿದೆ ಎಂದು ಲಸಿಕೆ ತಯಾರಿಕಾ ಸಂಸ್ಥೆಯಾದ ಸೆರುಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ)ಆದಾರ್ ಪೂನಾವಾಲಾ ಅವರು ಹೇಳಿದ್ದಾರೆ.

ಬರುವ ಏಪ್ರಿಲ್ ತಿಂಗಳ ವೇಳೆಗೆ ಜನಸಾಮಾನ್ಯರಿಗೆ ಲಸಿಕೆ ಲಭ್ಯವಾಗಲಿದೆ . ಇದರ ಗರಿಷ್ಠ ಬೆಲೆ ೧೦೦೦ ರೂಪಾಯಿ ಆಗಬಹುದೆಂದು ಅವರು ಹೇಳಿದ್ದಾರೆ.

ಮಾನವ ಪ್ರಯೋಗಗಳ ಅಂತಿಮ ಫಲಿತಾಂಶ ಹಾಗೂ ಅಗತ್ಯವಿರುವ ಅನುಮೋದನೆ ನಂತರ, ಸಾರ್ವಜನಿಕರಿಗೆ ಅಗತ್ಯವಿರುವ ೨ ಡೋಸ್‌ಗಳಿಗೆ ಗರಿಷ್ಠ ೧೦೦೦ ರೂಪಾಯಿ ದರ ನಿಗದಿಯಾಗುವ ಸಾಧ್ಯತೆ ಇರುತ್ತದೆ ಎಂದು ಅವರು ಹೇಳಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಲೀಡರ್ ಶಿಪ್ ಶೃಂಗಸಭೆ ೨೦೨೦ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ೨೦೨೪ರ ವೇಳೆಗೆ ಪ್ರತಿಯೊಬ್ಬ ಭಾರತೀಯನಿಗೂ ಲಸಿಕೆ ಹಾಕಬಹುದಾಗಿದೆ ಎಂದು ತಿಳಿಸಿದ್ದಾರೆ.

ಎರಡು – ಮೂರು ವರ್ಷಗಳಲ್ಲಿ ಪ್ರತಿಯೊಬ್ಬ ಭಾರತೀಯನಿಗೆ ಲಸಿಕೆ ನೀಡಲು ಸಮಯ ತೆಗೆದುಕೊಳ್ಳಬಹುದಾಗಿದೆ. ಪೂರೈಕೆಯಲ್ಲಿನ ಸಮಸ್ಯೆಗಳಿಂದ ಮಾತ್ರವಲ್ಲದೆ, ಅಗತ್ಯವಿರುವ ಬಜೆಟ್, ಲಸಿಕೆ, ಲಾಜಿಸ್ಟಿಕ್ಸ್, ಮೂಲಭೂತ ಸೌಕರ್ಯ ಹಾಗೂ ಲಸಿಕೆ ತೆಗೆದುಕೊಳ್ಳಲು ಜನರ ಒಪ್ಪಿಗೆ ವಿಚಾರಗಳು ಸಮಯ ತೆಗೆದುಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಾ ವಿಚಾರಗಳು ಅಂತಿಮಗೊಂಡರೆ ದೇಶದ ೮೦ ರಿಂದ ೯೦ರಷ್ಟು ಜನರಿಗೆ ಲಸಿಕೆ ನೀಡಬಹುದಾಗಿದೆ ೨೦೨೪ ರ ವೇಳೆಗೆ ಪ್ರತಿಯೊಬ್ಬರಿಗೂ ಲಸಿಕೆ ನೀಡಬಹುದಾಗಿದೆ. ಜನರು ಬಯಸಿದರೆ ಪ್ರತಿಯೊಬ್ಬರಿಗೂ ೨ ಡೋಸ್ ಲಸಿಕೆ ನೀಡಲು ಸಾಧ್ಯವಿರುತ್ತದೆ ಎಂದು ಪೂನಾವಾಲಾ ಹೇಳಿದ್ದಾರೆ.

ಸಾರ್ವಜನಿಕರು ಲಸಿಕೆಯನ್ನು ಪಡೆಯಬೇಕಾದರೆ ಎಷ್ಟು ಹಣ ಖರ್ಚು ಮಾಡಬೇಕಾದೀತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಯೊಬ್ಬರಿಗೂ ಎರಡು ಡೋಸ್ ಲಸಿಕೆ ನೀಡಬೇಕಾದರೆ ಐದರಿಂದ ಆರು ಅಮೆರಿಕ ಡಾಲರ್ ಆಗಬಹುದು ಭಾರತದಲ್ಲಿ ಇದರ ಬೆಲೆ ಸುಮಾರು ೧೦೦೦ ರೂಪಾಯಿಗಳಾಗಬಹುದು ಎಂದು ಅವರು ಹೇಳಿದ್ದಾರೆ.

ಭಾರತ ಸರ್ಕಾರ ಈ ಲಸಿಕೆಯನ್ನು ಅತ್ಯಂತ ಅಗ್ಗದ ದರದಲ್ಲಿ ಅಂದರೆ, ಮೂರರಿಂದ ೪ ಅಮೆರಿಕ ಡಾಲರ್‌ಗಳಿಗೆ ಖರೀದಿಸಬಹುದಾಗಿದೆ. ಏಕೆಂದರೆ ದೊಡ್ಡ ಪ್ರಮಾಣದಲ್ಲಿ ಲಸಿಕೆಯನ್ನು ಭಾರತ ಖರೀದಿಸುತ್ತಿದೆ. ಕೋವಾಕ್ಸ್ ಲಸಿಕೆಗೆ ತಗಲುವ ವೆಚ್ಚದ ಅಷ್ಟೇ ಇದು ಇರಲಿದೆ. ಮಾರುಕಟ್ಟೆಯಲ್ಲಿಂದು ಲಭ್ಯ ಇರುವ ಇತರ ಲಸಿಕೆಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಹಾಗೂ ಕೈಗೆಟುಕುವ ದರದಲ್ಲಿ ಇರುತ್ತದೆಯೆದು ಪೂನಾವಾಲಾ ಹೇಳಿದ್ದಾರೆ.

ಲಸಿಕೆಯ ಪರಿಣಾಮಕಾರಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅವರು, ಆಕ್ಸ್ಫರ್ಡ್ ಆಸ್ಟ್ರಾಝೆನೆಕಾ ಲಸಿಕೆ ಹಿರಿಯ ನಾಗರಿಕರ ಮೇಲೆ ಅತ್ಯುತ್ತಮ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ. ಸುದೀರ್ಘಕಾಲದ ರೋಗನಿರೋಧಕ ಶಕ್ತಿ ಮತ್ತು ಆಂಟಿ ಬಾಡಿಗಳನ್ನು ಉತ್ಪಾದಿಸಲು ಇದು ಸಹಕಾರಿಯಾಗಲಿದೆ. ದೀರ್ಘಾವಧಿಗೆ ಈ ಲಸಿಕೆ ಜನರ ಆರೋಗ್ಯ ರಕ್ಷಣೆಗೆ ಸಹಕಾರಿ ಯಾಗಲಿದೆ ಎಂಬುದನ್ನು ಕಾಲವೇ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ಲಸಿಕೆಯ ಸುರಕ್ಷತೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇದುವರೆಗೂ ಯಾವುದೇ ಗುರುತರ ವಾದಂತಹ ದೂರುಗಳು ಬಂದಿಲ್ಲ. ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಕೇಳಿಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಾವು ಕಾದು ನೋಡುವ ಅಗತ್ಯವಿದೆ ಇದರ ಪರಿಣಾಮ ಮತ್ತು ಫಲಿತಾಂಶಗಳನ್ನು ಭಾರತದಲ್ಲಿ ನಡೆಸುತ್ತಿರುವ ಮಾನವ ಪ್ರಯೋಗಗಳ ನಂತರ ಅಂದರೆ ಕೆಲವೇ ತಿಂಗಳುಗಳಲ್ಲಿ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.