ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ಕಾರ್ಯಪ್ರವೃತ್ತರಾಗುವಂತೆ ಸೂಚನೆ

೩ನೇ ಅಲೆ: ಮಕ್ಕಳ ತಜ್ಞರೊಂದಿಗೆ ಡಿಸಿ ಪೂರ್ವಭಾವಿ ಸಭೆ
ರಾಯಚೂರು, ಜೂ.೦೮-ಅಕಸ್ಮಾತ್ ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ಕಂಡು ಬಂದಲ್ಲಿ, ಅದರ ನಿಯಂತ್ರಣಕ್ಕೆ ಹಾಗೂ ಸೂಕ್ತ ಚಿಕಿತ್ಸೆಗೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್ ಸಂಬಂಧಿಸಿದ ಅಧಿಕಾರಿಗಳು ಹಾಗೂ ವೈದ್ಯರಿಗೆ ನಿರ್ದೇಶನ ನೀಡಿದರು.
ಅವರು ಜೂ ೭ರ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ಮೂರನೇ ಅಲೆಯ ಎದುರಾದಲ್ಲೀ ಅದರ ಪೂರ್ವಭಾವಿ ಸಿದ್ದತೆಗಳ ಕುರಿತು ಮಕ್ಕಳ ತಜ್ಞರೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂರನೇ ಅಲೆ ಎದುರಾದರೆ ವಿಶೇಷವಾಗಿ ಮಕ್ಕಳಲ್ಲಿ ಈ ಸೋಂಕು ಕಾಣಿಸಿಕೊಳ್ಳಲಿದೆ ಎಂಬ ವರದಿ ಹಿನ್ನಲೆಯಲ್ಲಿ ಈ ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ನೀಡಬೇಕಾದ ಚಿಕಿತ್ಸೆಗೆ ಅಗತ್ಯ ಮೂಲಭೂತ ಸೌರ್ಕಯಗಳಾದ ಹಾಸಿಗೆಗಳು, ಉಪಕರಣಗಳು ಹಾಗೂ ವಿಶಾಲ ಸ್ಥಳದ ಅಗತ್ಯವಿದೆ, ಮಾನವ ಸಂಪನ್ಮೂಲದಲ್ಲಿ ವೈದ್ಯರು, ನುರಿತ ನರ್ಸ್‌ಗಳು ಹಾಗೂ ಇತರೆ ಸಿಬ್ಬಂದಿ ಮತ್ತು ಚಿಕಿತ್ಸೆಗೆ ಅಗತ್ಯತೆ ಇರುವ ಬೇಡಿಕೆಗಳನ್ನು ತಿಳಿಸುವಂತೆ ಮಕ್ಕಳ ತಜ್ಞರಿಗೆ ನಿರ್ದೇಶನ ನೀಡಿದರು.
ಐಸಿಯು, ಎನ್‌ಐಸಿಯು, ಪಿಐಸಿಯು ಮತ್ತು ಜನರಲ್ ವಾರ್ಡ್‌ಗಳನ್ನು ಸಿದ್ದಪಡಿಸಿಕೊಳ್ಳಬೇಕು, ಅಮ್ಲಜನ ಪೂರೈಕೆ, ಮಕ್ಕಳ ಅಳತೆಯ ಮಾಸ್ಕ್, ಆಮ್ಲಜನ ಹಾಸಿಗೆಗಳ ಅಗತ್ಯತೆ ಇರುತ್ತದೆ, ಎನ್‌ಐಸಿಯುನಲ್ಲಿ ೪೦ ಹಾಸಿಗಳನ್ನು ಕೋವಿಡ್ ಸೋಂಕಿತರಿಗೆ ಹಾಗೂ ೪೦ ಹಾಸಿಗೆಗಳನ್ನು ಇತರರಿಗೆ ಸೇರಿದಂತೆ ಒಟ್ಟು ೮೦ ಹಾಸಿಗಳನ್ನು ಮೀಸಲಿಟ್ಟುಕೊಳ್ಳಬೇಕು ಎಂದರು.
ಚಿಕಿತ್ಸೆಗೆ ಪೂರಕವಾಗಿರುವ ವೈದ್ಯಕೀಯ ಆಕ್ಸಿಜನ್ ಪೂರೈಕೆಗೆ ಪ್ರತ್ಯೇಕ ಮಾರ್ಗವನ್ನು ಅಳವಡಿಸಬೇಕು. ಕನಿಷ್ಠ ೧೨ ಗಂಟೆಗಳ ಆಮ್ಲಜನಕದ ಬಫರ್ ಸ್ಟಾಕ್ ಇರಬೇಕು. ಅಗತ್ಯ ಇರುವ ಔಷಧಿಗಳು ಮತ್ತು ಇಂಜಕ್ಷನ್ ಸಂಗ್ರಹಿಸಿ ಇಟ್ಟುಕೊಳ್ಳಬೇಕು, ಮುಖ್ಯವಾಗಿ ಏಪ್ರಿಲ್ ೧ ರಿಂದ ಮೇ ೩೧ರವರೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಕೋವಿಡ್ ಪಾಸಿಟಿವ್ ಗರ್ಭೀಣಿಯರ ವಿವರ ಸಂಗ್ರಹಿಸುವಂತೆ ಅವರು ಸೂಚಿಸಿದರು.
ಈ ವೇಳೆ ರಿಮ್ಸ್ ನಿರ್ದೇಶಕ ಡಾ. ಬಸವರಾಜ ಪೀರಾಪುರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸುರೇಂದ್ರಬಾಬು, ಜಿಲ್ಲಾಶಸ್ತ್ರಚಿಕಿತ್ಸಕ ಡಾ. ವಿಜಯ ಶಂಕರ್, ಡಿಎಸ್‌ಒ ಡಾ. ನಾಗರಾಜ್, ಮಕ್ಕಳ ತಜ್ಞರಾದ ಡಾ. ನಾಗರಾಜ್ ಜವಳಿ, ಡಾ. ವಿಜಯ ಸುಕಾಣಿ, ಡಾ. ನಸೀಮ ಭಾನು, ಡಾ. ಶೋಭಾ ಸಿದ್ದೇಶ್, ಡಾ. ಪ್ರಕಾಶ್, ಡಾ. ಬಸನಗೌಡ ಹಾಗೂ ಇತರರಿದ್ದರು.