ಸೋಂಕಿತರ ಸಾವಿಗೆ ಸರ್ಕಾರವೇ ಹೊಣೆ

ಬೆಂಗಳೂರು, ಮೇ.೨೧-ಬೆಂಗಳೂರಿನಲ್ಲಿ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಅಥವಾ ಆರೈಕೆಯಲ್ಲಿದ್ದವರ ಪೈಕಿ ಮೇ ತಿಂಗಳಲ್ಲಿ ೭೭೮ ಮಂದಿ ಸಾವಿನ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಟೀಕಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮನೆ ಆರೈಕೆಯಲ್ಲಿದ್ದ ಕೊರೋನಾ ಸೋಂಕಿತರಿಗೆ ಸರ್ಕಾರ ಹಾಗೂ ಬಿಬಿಎಂಪಿ ವತಿಯಿಂದ ಪ್ರತಿ ದಿವಸ ಸೂಕ್ತ ವೈದ್ಯಕೀಯ ಉಪಚಾರಗಳು, ಸಹಾಯ , ಮಾರ್ಗದರ್ಶನ ಹಾಗೂ ಆರೈಕೆ ಇದ್ಯಾವುದೂ ಸಿಗದ ಕಾರಣದಿಂದ ಈ ದುರ್ಘಟನೆ ಬೆಳಕಿಗೆ ಬಂದಿದೆ ಎಂದು ದೂರಿದರು.
ಈ ಎಲ್ಲಾ ಸಾವುಗಳಿಗೆ ಸರ್ಕಾರ ನಡೆಸುವವರ ಸಂಪೂರ್ಣ ಬೇಜವಾಬ್ದಾರಿತನ, ನಿರ್ಲಕ್ಷ್ಯ ತನವೇ ನೇರ ಕಾರಣವಾಗಿದ್ದು, ಇದು ಸರ್ಕಾರಿ ಪ್ರಾಯೋಜಿತ ಕಗ್ಗೊಲೆಗಳು ಎಂದು ವಾಗ್ದಾಳಿ ನಡೆಸಿದ ಅವರು, ಸರ್ಕಾರವು ಸೋಂಕು ಪೀಡಿತರಿಗೆ ಬೆಡ್ ಗಳನ್ನು ಪೂರೈಸಲು ಅಸಹಾಯಕವಾಗಿ ಮನೆಗಳಲ್ಲಿಯೇ ಆರೈಕೆ ಪಡೆದುಕೊಳ್ಳಬೇಕೆಂದು ಹೇಳಿ ಕೇವಲ ಕೈ ತೊಳೆದುಕೊಂಡಿತೇ ಹೊರತು ಆ ರೋಗಿಗಳ ಸ್ಥಿತಿಗತಿ ಏನಾಗಿದೆ ಎಂಬ ಪರಿಶೀಲನೆಯನ್ನು ಮಾಡಲೇ ಇಲ್ಲ ಎಂದರು.
ಸೂಕ್ತ ಸಮಯದಲ್ಲಿ ಸೂಕ್ತ ವೈದ್ಯಕೀಯ ಸಲಹೆ ಉಪಚಾರಗಳು ಸಿಕ್ಕಿದ್ದಲ್ಲಿ ಈ ಸಾವುಗಳನ್ನು ತಡೆಯಬಹುದಾಗಿತ್ತು . ಅದನ್ನು ಬಿಟ್ಟು ಬಿಬಿಎಂಪಿ ಹಾಗೂ ಸರ್ಕಾರದ ಮಂತ್ರಿಗಳು ಬರೀ ಸುಳ್ಳುಗಳನ್ನೇ ಹೇಳಿಕೊಂಡು ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದುದೇ ಈ ಎಲ್ಲಾ ಸಾವುಗಳಿಗೆ ಕಾರಣ ಎಂದು ನಾಗಣ್ಣ ಆರೋಪಿಸಿದರು.
ಈ ಬಗ್ಗೆ ಸರ್ಕಾರವೇ ರಚಿಸಿರುವ ಸಾವು ವಿಶ್ಲೇಷಣಾ ಸಮಿತಿ ನೀಡಿರುವ ವರದಿ ನೂರಕ್ಕೆ ನೂರು ಸತ್ಯವಾಗಿದೆ.ಆದರೆ ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್ ಗುಪ್ತ ಮತ್ತೆ ಮರು ಪರಿಶೀಲಿಸಿ ವರದಿ ನೀಡುವಂತೆ ಆದೇಶ ನೀಡಿರುವುದು ನಿಜಕ್ಕೂ ದಾರಿ ತಪ್ಪಿಸುವ ಹಾಗೂ ಪ್ರಭಾವಿ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರ.
ಈ ಬಗ್ಗೆ ಮಾನ್ಯ ಉಚ್ಚ ನ್ಯಾಯಾಲಯವು ಮಧ್ಯ ಪ್ರವೇಶಿಸಿ ಕಾರಣಕರ್ತರಾದ ಪ್ರಭಾವಿಗಳನ್ನು ಶಿಕ್ಷಿಸಲು ಸೂಕ್ತ ಆದೇಶಗಳನ್ನು ನೀಡಬೇಕೆಂದು ಹಾಗೂ ಮುಂದಾಗುವ ಸಾವು ನೋವುಗಳನ್ನು ತಡೆಯಲು ಸೂಕ್ತ ಕಠಿಣ ನಿರ್ದೇಶನಗಳನ್ನು ಸರ್ಕಾರ ಹಾಗೂ ಬಿಬಿಎಂಪಿಗೆ ನೀಡಬೇಕೆಂದು ಒತ್ತಾಯಿಸಿದರು.