ಸೋಂಕಿತರ ಸಂಖ್ಯೆ 1.5 ಕೋಟಿಗೆ ಏರಿಕೆ

ನವದಹಲಿ,ಏ,೧೭- ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯ ಆರ್ಭಟ ಮಿತಿಮೀರಿ ವ್ಯಾಪಿಸುತ್ತಿದೆ. ಸತತ ಮೂರನೇ ದಿನವೂ ೨ ಲಕ್ಷ ಗಡಿ ದಾಟಿ ಜನರನ್ನು ನಿದ್ದೆಗೆಡಿಸಿದೆ.
ಇಂದು ದಾಖಲಾಗಿರುವ ಸೋಂಕು ಕಳೆದ ಎರಡು ದಿನಗಳಿಂತ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೂಡಿದೆ. ಹೀಗಾಗಿ ಸೋಂಕು ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಲೆನೋವು ತಂದಿದೆ.
ಬೆಳಗ್ಗೆ ೮ ಗಂಟೆಯವರೆಗೆ ದೇಶದಲ್ಲಿ ೨,೩೪,೬೯೨ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ದೇಶದಲ್ಲಿ ಇದು ಸೋಂಕಿನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಕಳೆದ ೨೪ ಗಂಟೆಗಳಲ್ಲಿ ಸೋಂಕಿನಿಂದ ೧೩೪೧ ಮಂದಿ ಮೃತಪಟ್ಟಿದ್ದು , ೧,೨೩,೩೫೪ ಮಂದಿ ಆಸ್ಪತ್ರೆಯಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಹೊಸದಾಗಿ ದಾಖಲಾಗಿರುವ ಸೋಂಕು ಸಂಖ್ಯೆ ಸೇರಿದಂತೆ ದೇಶದಲ್ಲಿ ಇಲ್ಲಿಯವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ ೧,೪೫,೨೬,೬೦೯ಕ್ಕೆ ಏರಿಕೆಯಾಗಿದೆ. ಜೊತೆಗೆ ಚೇತರಿಸಿಕೊಂಡವರ ಸಂಖ್ಯೆ ೧,೨೬,೭೧,೨೨೦ ಮಂದಿಗೆ ಏರಿಕೆಯಾಗಿದೆ. ಇಂದು ಹೊಸದಾಗಿ ಮೃತಪಟ್ಟ ಮಂದಿ ಸೇರಿದಂತೆ ಇಲ್ಲಿಯ ತನಕ ೧,೭೫,೬೪೯ ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಕಳೆದ ಎರಡು ತಿಂಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.೧೨ ರಷ್ಟು ಹೆಚ್ಚಾಗಿದೆ. ಜೊತೆಗೆ ಸೋಂಕಿನಿಂದ ಚೇತರಿಕೆ ಪ್ರಮಾಣ ದಿನನಿತ್ಯ ಗಣನೀಯವಾಗಿ ಕುಸಿಯುತ್ತಿದೆ. ಅದ್ಯ ಚೇತರಿಕೆ ಪ್ರಮಾಣ ಶೇ.೮೭.೨೨ ರಷ್ಟು ಇದೆ.
ಮೊದಲ ಸ್ಥಾನದತ್ತ:
ವಿಶ್ವದಲ್ಲಿ ಕೊರೊನಾ ಸೋಂಕಿನಲ್ಲಿ ಬ್ರೆಜಿಲ್ ಹಿಂದಿಕ್ಕಿ ಎರಡನೇ ಸ್ತಾನದಲ್ಲಿರುವ ಭಾರತ ದೇಶದಲ್ಲಿ ಇದೇ ರೀತಿ ಸೋಂಕು ಸಂಖ್ಯೆ ಹೆಚ್ಚಾದರೆ ಆರಂಭದಿಂದಲೂ ಮೊದಲ ಸ್ಥಾನದಲ್ಲಿರುವ ಅಮೇರಿಕಾವನ್ನು ಹಿಂದಿಕ್ಕುವುದರಲ್ಲಿ ಯಾವುದೇ ಅನುಮಾನವಿಲ್ಲ.
ದೇಶದಲ್ಲಿ ನಿತ್ಯ ೨ ಲಕ್ಷ ಗಡಿ ದಾಟಿ ಸೋಂಕು ತಗುಲುತ್ತಿದೆ.ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಸೋಂಕು ತಡೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ವಿರೋಧ ಪಕ್ಷಗಳ ಕಡು ಕೋಪಕ್ಕೆ ಕಾರಣವಾಗಿದೆ.

೧೬.೭೯ ಲಕ್ಷ ಸಕ್ರಿಯ ಪ್ರಕರಣ

ದೇಶದಲ್ಲಿ ನಿತ್ಯ ಕೊರೊನಾ ಸೋಂಕಿನ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಮಹಾರಾಷ್ಟ್ರ, ಕರ್ನಾಟಕ,ಕೇರಳ,ತಮಿಳುನಾಡು, ಆಂದ್ರ ಪ್ರದೇಶ, ತೆಲಂಗಾಣ, ಒಡಿಶಾ,ಮಧ್ಯಪ್ರದೇಶ, ಉತ್ತರ ಪ್ರದೇಶ, ಛತ್ತೀಸ್ ಗಡ, ಚಂದೀಗಡ, ಪಂಜಾಬ್, ದೆಹಲಿ, ರಾಜಸ್ತಾನ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಸಕ್ರಿಮ ಪ್ರಕರಣಗಳ ಸಂಖ್ಯೆ ದಾಖಲೆ ಬರೆದಿದೆ.

ಸದ್ಯ ದೇಶದಲ್ಲಿ ೧೬,೭೯,೭೪೦ ಮಂದಿಯಲ್ಲಿ ಸಕ್ರಿಯ ಪ್ರಕರಣಗಳಿದ್ದು ಕಳೆದ ಎರಡು ತಿಂಗಳ ಅವಧಿಯಲ್ಲಿ ೧೫ ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಸಕ್ರಿಯ ಪ್ರಕರಣ ಕಾಣಿಸಿಕೊಂಡಿದೆ.

೧೨ ಕೋಟಿಗೆ ಲಸಿಕೆ

ದೇಶದಲ್ಲಿ ಒಂದೆಡೆ ಕೊರೋನಾ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಮತ್ತೊಂದು ಕಡೆ ದೇಶದಲ್ಲಿ ಲಸಿಕೆ ಹಾಕುವ ಕಾರ್ಯವೂ ನಡೆಯುತ್ತಿದೆ. ಇಲ್ಲಿಯವರೆಗೆ ಸರಿ ಸುಮಾರು ೧೨ ಕೋಟಿ ಮಂದಿಗೆ ಲಸಿಕೆ ಹಾಕಲಾಗಿದೆ.

ದೇಶದಲ್ಲಿ ನಿನ್ನೆ ಸಂಜೆಯವರೆಗೆ ೧೧,೯೯,೩೭,೬೪೧ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.