ಸೋಂಕಿತರ ಸಂಖ್ಯೆ ಏರಿಕೆ ದೇಶದಲ್ಲಿ ಮತ್ತೇ ತಳಮಳ

ನವದೆಹಲಿ, ನ. ೧೯- ದೇಶಾದ್ಯಂತ ಕೊರಾನಾ ಮಹಾಮಾರಿಯ ಉಪಟಳ ಮತ್ತೆ ಹೆಚ್ಚಾಗುತ್ತಿರುವಂತೆ ಕಂಡುಬರುತ್ತಿದೆ. ಕಳೆದ ಮೂರುದಿನಗಳಿಂದ ಇಳಿಮುಖ ದತ್ತ ಸಾಗಿದ್ದ ಸೋಂಕಿತರ ಸಂಖ್ಯೆ ನಿನ್ನೆ ಒಂದೇ ದಿನದಲ್ಲಿ ದಿಡೀರನೆ ಹೆಚ್ಚಾಗಿರುವುದು ಜನರಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಕಳೆದ ಮೂರುದಿನಗಳಿಂದ ೩೯ ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದ್ದ ಸೋಂಕಿತರ ಸಂಖ್ಯೆ ನಿನ್ನೆ ದಿಡೀರನೆ ೪೫ ಸಾವಿರ ದಾಟಿದೆ.ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಗ್ಗೆ ನೀಡಿರುವ ಮಾಹಿತಿ ಪ್ರಕಾರ ೨೪ ಗಂಟೆಗಳಲ್ಲಿ ೪೫ ಸಾವಿರದ ೫೭೬ ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ.

ಇದರೊಂದಿಗೆ ದೇಶದಲ್ಲಿ ೮೯ ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಸೋಂಕಿತರ ಸಂಖ್ಯೆ ೯೦ ಲಕ್ಷದತ್ತ ಸಾಗುತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು.

ಸಚಿವಾಲಯದ ಮೂಲಗಳ ಪ್ರಕಾರ ದೇಶದಲ್ಲಿ ೮೯ ಲಕ್ಷದ ೫೮ ಸಾವಿರದ ೪೮೩ ಸೋಂಕು ಪ್ರಕರಣಗಳು ದಾಖಲಾಗಿವೆ. ಇದುವರೆಗೆ ೧ ಲಕ್ಷದ ೩೧ ಸಾವಿರದ ೫೭೮ ಸೋಂಕಿತರು ಗುಣಮುಖರಾಗದೇ ಸಾವನ್ನಪ್ಪಿದ್ದಾರೆ.

ಚೇತರಿಕೆ ಪ್ರಮಾಣವು ಹೆಚ್ಚಾಗಿದ್ದು ದೇಶದಲ್ಲಿ ಇದುವರೆಗೆ ೮೩ ಲಕ್ಷದ ೮೩ ಸಾವಿರದ ೬೦೨ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗಳಿಗೆ ತೆರಳಿದ್ದಾರೆ. ಕೆಲವರು ಮನೆಗಳಲ್ಲಿ ಪ್ರತ್ಯೇಕವಾಸ ಅನುಭವಿಸುತ್ತಿದ್ದಾರೆ.

ಕಳೆದ ೨೪ ಗಂಟೆಗಳಲ್ಲಿ ೪೮ ಸಾವಿರದ ೪೯೩ ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ ಗುಣಮುಖ ಹೊಂದುತ್ತಿರುವ ರೋಗಿಗಳ ಪ್ರಮಾಣ ಶೇಕಡ ೯೩. ೫೮ ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ದಾಖಲೆಗಳಿಂದ ತಿಳಿದುಬಂದಿದೆ.

ಇಡೀ ವಿಶ್ವದಲ್ಲೇ ಭಾರತದಲ್ಲಿ ಸಾವಿನ ಸಂಖ್ಯೆ ಅತ್ಯಂತ ಕಡಿಮೆ ಎಂಬುದು ಸಾಬೀತಾಗಿದೆ. ಪತಿ ಒಂದು ದಶಲಕ್ಷ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಕಳೆದ ಏಳು ದಿನಗಳಿಂದೀಚೆಗೆ ಮರಣ ಪ್ರಮಾಣ ತೀರ ಕಡಿಮೆಯಾಗಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದ್ದು, ಪ್ರಸ್ತುತ ದೇಶದಲ್ಲಿ ೪ ಲಕ್ಷದ ೪೩ ಸಾವಿರದ ೩೧೩ ಪ್ರಕರಣಗಳು ದಾಖಲಾಗಿವೆ. ಈ ಪ್ರಮಾಣ ಶೇಕಡ ೪. ೯೫ ರಷ್ಟಿದೆ.

ಈ ನಡುವೆ ಜಾಗತಿಕವಾಗಿ ಮಹಾಮಾರಿ ರೋಗದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವಿಶ್ವದಲ್ಲಿ ೫ ಕೋಟಿ ೬೧ ಲಕ್ಷದ ೮೭ ಸಾವಿರದ ೫೬೩ ಪ್ರಕರಣಗಳು ದಾಖಲಾಗಿವೆ. ಅಮೇರಿಕಾ ಒಂದರಲ್ಲೇ ಒಂದು ಕೋಟಿ ೧೫ ಲಕ್ಷದ ೨೫ ಸಾವಿರದ ೫೪೦ ಪ್ರಕರಣಗಳು ದಾಖಲಾಗಿದೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಮೂಲಗಳ ಪ್ರಕಾರ ಇದುವರೆಗೆ ವಿಶ್ವದಲ್ಲಿ ೧೩ ಲಕ್ಷದ ೪೮ ಸಾವಿರ ೬೦೦ ಸೋಂಕಿತರು ಗುಣಮುಖರಾಗದೇ ಸಾವನ್ನಪ್ಪಿದ್ದಾರೆ.