ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿರುವಂತೆ ಸಿಸಿಸಿ ಹೆಚ್ಚಳ

ದಾವಣಗೆರೆ,ಮೇ.26: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆ, ಸೋಂಕಿತರ ಆರೈಕೆಗಾಗಿ ಕೋವಿಡ್ ಕೇರ್ ಸೆಂಟರ್‌ಗಳನ್ನು ಸಹ ಹೆಚ್ಚಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಸಿಸಿಸಿಗಳಲ್ಲಿ ಬೆಡ್‌ಗಳ ಸಂಖ್ಯೆ ಸಹ ಹೆಚ್ಚಿಸಿ, ಸೋಂಕಿತರ ಆರೈಕೆಗೆ ಸಕಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಕೊರೊನಾ ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ತೆರೆದಿದ್ದ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 230 ಬೆಡ್‌ಗಳ ವ್ಯವಸ್ಥೆ ಮಾತ್ರ ಇತ್ತು. ಆದರೆ, ಕೊರೊನಾ ಅಬ್ಬರ ಹೆಚ್ಚಾಗುತ್ತಿದ್ದಂತೆ, ಸೋಂಕಿತರ ಸಂಖ್ಯೆಯಲ್ಲೂ ಏರಿಕೆ ಆಗತೋಡಗಿತು.
ಹೀಗಾಗಿ ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ಕೋವಿಡ್ ಕೇರ್ ಸೆಂಟರ್‌ಗಳ ಸಂಖ್ಯೆ ಮತ್ತು ಹಾಸಿಗೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಪ್ರಾರಂಭದಲ್ಲಿ ಕೋವಿಡ್ ದೃಢಪಟ್ಟವರಲ್ಲಿ ಹೆಚ್ಚಿನ ರೋಗ ಲಕ್ಷಣಗಳಿಲ್ಲದಿರುವವರನ್ನು ಔಷಧಿ ನೀಡಿ, ಹೋಂ ಐಸೋಲೇಷನ್‌ಗೆ ಒಳ ಪಡಿಸಲಾಗುತ್ತಿತ್ತು. ಹೀಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವವರು ಎಲ್ಲೆಂದರಲ್ಲಿ ಓಡಾಡಿ, ಸೋಂಕು ಹೆಚ್ಚಳಕ್ಕೂ ಕಾರಣವಾಗ ತೊಡಗಿದರು.
ಆದ್ದರಿಂದ ಎಚ್ಚೆತ್ತಕೊಂಡ ಸರ್ಕಾರ ಕೋವಿಡ್ ದೃಢಪಟ್ಟವರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವ ತೀರ್ಮಾನ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಕಳೆದ ವಾರ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಇನ್ನೂ ಮುಂದೆ ಕೋವಿಡ್ ಸೋಂಕು ಬಂದವರೂ ಎಷ್ಟು ದೊಡ್ಡವರಾಗಿದ್ದರೂ ಪರವಾಗಿಲ್ಲ. ಯಾರಿಗೂ ಹೆದರದೆ ಎಲ್ಲರನ್ನೂ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವಂತೆ ಜಿಲ್ಲಾಡಳಿತಕ್ಕೆ ತಾಕೀತು ಮಾಡಿ ಹೋಗಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸಹ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕೋವಿಡ್ ಕೇರ್ ಸೆಂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ. ಇದರ ಭಾಗವಾಗಿ ಮೊದಲು ನಗರದ ಜೆ.ಎಚ್.ಪಟೇಲ್ ಬಡವಾಣೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸೀಮಿತವಾಗಿದ್ದ ಕೋವಿಡ್ ಕೇರ್ ಸೆಂಟರ್‌ಗಳು ಈಗ ತರಳಬಾಳು ಹೆಣ್ಣುಮಕ್ಕಳ ಹಾಸ್ಟೆಲ್, ಜೈನ್ ಸಮುದಾಯ ಭವನ, ಹರಿಹರ ತಾಲ್ಲೂಕಿನ ಗುತ್ತೂರು ಬಿಸಿಎಂ ಹಾಸ್ಟೆಲ್, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ, ಹೊನ್ನಾಳಿ ತಾಲೂಕಿನ ಮಾದಬಾವಿಯ ಮೂರಾರ್ಜಿ ದೇಸಾಯಿ ಸ್ಕೂಲ್, ಕಡದಕಟ್ಟೆ ಕಿತ್ತೂರುರಾಣಿ ಚನ್ನಮ್ಮ ಶಾಲೆ, ಚನ್ನಗಿರಿ ತಾಲ್ಲೂಕಿನ ಕಾಕನೂರಿನ ಕಿತ್ತೂರುರಾಣಿ ಚೆನ್ನಮ್ಮ ಶಾಲೆ, ಜಗಳೂರಿ ತಾಲ್ಲೂಕಿನ ಮೂರಾರ್ಜಿ ಶಾಲೆ, ಮುಸ್ಟೂರಿನ ಕಿತ್ತೂರು ರಾಣಿ ಚನ್ನಮ್ಮ ಶಾಲೆ, ಹರಿಹರದ ಎಸ್‌ಜೆವಿಪಿ ಕಾಲೇಜು ವಿದ್ಯಾರ್ಥಿ ನಿಲಯಗಳಲ್ಲಿ ತಲೆ ಎತ್ತಿದ್ದು, ಇಲ್ಲಿ 1810 ಬೆಡ್‌ಗಳ ವ್ಯವಸ್ಥೆ ಇದ್ದು, ಈ ಪೈಕಿ 1140 ಬೆಡ್‌ಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಸಿಸಿ ಉಸ್ತುವಾರಿ ನೋಡಿಕೊಳ್ಳುತಿರುವ ಡಾ.ನಟರಾಜ್ ಮಾಹಿತಿ ನೀಡಿದರು.
ಇನ್ನು ಬೂದಾಳ್ ರಸ್ತೆಯ ತಾಜ್ ಪ್ಯಾಲೇಸ್‌ನಲ್ಲಿ, ಬಾಡಾ ಕ್ರಾಸ್‌ನ ಸಮಾಜ ಕಲ್ಯಾಣ ಇಲಾಖೆಯ 3 ಹಾಸ್ಟೆಲ್‌ಗಳಲ್ಲಿ ಸಿಸಿಸಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಇಂದು ಅಥವಾ ನಾಳೆಯಿಂದಲೇ ಇಲ್ಲಿ ಸೋಂಕಿತರನ್ನು ದಾಖಲು ಮಾಡಲಾಗುವುದು. ಇನ್ನೂ ಸೋಂಕಿತ ಸಂಖ್ಯೆ ಹೆಚ್ಚಾದರೆ ಬೇಡಿಕೆಗೆ ಅನುಗುಣವಾಗಿ ಕೋವಿಡ್ ಕೇರ್ ಸೆಂಟರ್ ಆರಂಭಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ನಿರ್ದೇಶನ ನೀಡಿದ್ದಾರೆ ಎಂದು ಅವರು ವಿವರಿಸಿದರು.