ಸೋಂಕಿತರ ಸಂಖ್ಯೆ ಇಳಿಮುಖ, ಚೇತರಿಕೆ ಹೆಚ್ಚಳ

ನವದೆಹಲಿ, ನ. ೧೫. ದೇಶದಲ್ಲಿ ಕೊರೊನಾ ಮಹಾಮಾರಿಯ ಉಪಟಳ ಕಡಿಮೆಯಾಗುತ್ತಿದೆ. ಕಳೆದ ಏಳು ದಿನಗಳಿಂದ ಪ್ರತಿನಿತ್ಯ ಹೊಸದಾಗಿ ಪತ್ತೆ ಆಗುತ್ತಿರುವ ಸೋಂಕಿತರ ಸಂಖ್ಯೆ ಸತತವಾಗಿ ೫೦ ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗುತ್ತಿರುವುದೇ ಈ ವಿಚಾರವನ್ನು ಪುಷ್ಟೀಕರಿಸುತ್ತದೆ.

ಅಕ್ಟೋಬರ್ ತಿಂಗಳ ಆರಂಭದಲ್ಲಿ ಸುಮಾರು ೭೩ ಸಾವಿರದಷ್ಟು ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಪ್ರಮಾಣ ಸುಮಾರು ೪೯ ಸಾವಿರಕ್ಕೆ ಇಳಿಕೆಯಾಗಿದೆ. ಹೆಚ್ಚು ಕಡಿಮೆ ಕಳೆದ ೫ ವಾರಗಳಿಂದ ಪ್ರತಿನಿತ್ಯದ ಹೊಸ ಪ್ರಕರಣಗಳ ಸಂಖ್ಯೆ ಸರಾಸರಿ ಕಡಿಮೆಯಾಗುತ್ತಿರುವುದು ಕಂಡುಬಂದಿದೆ.

ದೇಶದಲ್ಲಿ ಪ್ರಸ್ತುತ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಸೋಂಕಿತರ ಸಂಖ್ಯೆ ೯೦ ಲಕ್ಷದತ್ತ ಸಮೀಪಿಸುತ್ತಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಇದುವರೆಗೆ ದಾಖಲಾಗಿರುವ ಸೋಂಕಿತರ ಸಂಖ್ಯೆ ೮೭ ಲಕ್ಷದ ೭೩ ಸಾವಿರದ ೪೭೯ ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಪ್ರಕ್ರಿಯೆ ಮುಂದುವರೆದಿದೆ. ಇದು ವೈದ್ಯಕೀಯ ಸಮುದಾಯದಲ್ಲಿ ಹೊಸ ಆಶಾಭಾವನೆಯನ್ನು ಉಂಟುಮಾಡಿದೆ ಪ್ರಸ್ತುತ ಐದು ಲಕ್ಷಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಸಕ್ರಿಯ ಪ್ರಕರಣಗಳು ದಾಖಲಾಗಿವೆ.

ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಈಗ ೪ ಲಕ್ಷದ ೮೦ ಸಾವಿರದ ೭೧೯ ಸಕ್ರಿಯ ಪ್ರಕರಣಗಳು ಮಾತ್ರ ದಾಖಲಾಗಿದ್ದು ವೈದ್ಯರು ಮತ್ತು ಇತರ ಸಿಬ್ಬಂದಿ ಸೋಂಕಿತರಿಗೆ ಚಿಕಿತ್ಸೆ ನೀಡುವುದನ್ನು ಮುಂದುವರಿಸಿದ್ದಾರೆ.

ಪ್ರತಿನಿತ್ಯ ಹೊಸದಾಗಿ ದಾಖಲಾಗುತ್ತಿರು ವ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಾಣುತ್ತಿರುವುದಕ್ಕೆ ಜನರಲ್ಲಿನ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿರುವುದು ಆಗಿದೆ.

ಇನ್ನೊಂದೆಡೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸರ್ಕಾರಗಳು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರುವುದು ಕೂಡ ಸೋಂಕಿತರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ.

ಕಂಟೋನ್ಮೆಂಟ್ ಪ್ರದೇಶಗಳಲ್ಲಿ ಸ್ಥಳಿಯಾಡಳಿತ ಕಟ್ಟುನಿಟ್ಟಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿರುವುದು ಸೋಂಕು ಹರಡುವುದನ್ನು ತಡೆಯಲು ಸಹಕಾರಿಯಾಗಿದೆ ಎಂದು ಹೇಳಬಹುದಾಗಿದೆ.

ಶೇಕಡ ೯೩ ಚೇತರಿಕೆ ಪ್ರಮಾಣ

ಮಹಾಮಾರಿ ಸೋಂಕಿನಿಂದ ಚೇತರಿಕೆ ಕಾಣುತ್ತಿರುವ ಸೋಂಕಿತರ ಸಂಖ್ಯೆ ಶೇಕಡಾ ೯೩ ಕಿಂತ ಹೆಚ್ಚಾಗಿದೆ. ದೇಶದಲ್ಲಿ ಒಟ್ಟಾರೆ ಚೇತರಿಸಿಕೊಂಡ ಜನಸಂಖ್ಯೆ ಶೇಕಡ ೯೩.೦೫ ಕ್ಕೆ ತಲುಪಿದೆ. ಇದುವರೆಗೆ ೮೧ ಲಕ್ಷದ ೬೩ ಸಾವಿರದ ೫೭೨ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗಳಿಗೆ ತೆರಳಿದ್ದಾರೆ.

ಗುಣಮುಖರಾಗಿರುವ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆಯ ನಡುವೆ ಅಂತರ ಹೆಚ್ಚಾಗುತ್ತಿದ್ದು ಪ್ರಸ್ತುತ ೭೬ ಲಕ್ಷದ ೮೨ ಸಾವಿರದ ೮೫೩ ಸೋಂಕಿತರು ರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ ೪೨ ದಿನಗಳಿಂದ ಇದೇ ಪ್ರಕ್ರಿಯೆ ಮುಂದುವರೆದಿದೆ. ಪ್ರತಿನಿತ್ಯ ಚೇತರಿಸಿ ಕೊಳ್ಳುತ್ತಿರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ೧೦ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸದಾಗಿ ಚೇತರಿಸಿ ಕೊಳ್ಳುತ್ತಿರುವ ರೋಗಿಗಳ ಪ್ರಮಾಣ ಶೇಕಡ ೭೫ ಹೆಚ್ಚಾಗಿದೆ.

ಅದೇ ರೀತಿ ಹೊಸ ಸೋಂಕಿತರ ಸಂಖ್ಯೆ ರಾಜ್ಯಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿದೆ. ಹೊಸ ಸೋಂಕಿತರ ಸಂಖ್ಯೆ ಈ ರಾಜ್ಯಗಳಿಂದ ಶೇಕಡಾ ೭೬ ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಪತ್ತೆ ಆಗುತ್ತಿರುವುದು ದಾಖಲೆಗಳಿಂದ ತಿಳಿದುಬಂದಿದೆ.

ಕರ್ನಾಟಕ ಸೇರಿದಂತೆ ದೆಹಲಿ ಕೇರಳ ಮಹಾರಾಷ್ಟ್ರ ಪಶ್ಚಿಮ ಬಂಗಾಳ ಹರಿಯಾಣ ಉತ್ತರ ಪ್ರದೇಶ ರಾಜಸ್ಥಾನ ತಮಿಳುನಾಡು ಮತ್ತು ಆಂಧ್ರಪ್ದೇಶಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಈಗಲೂ ಸೋಂಕಿತ ರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.