ಸೋಂಕಿತರ ವೆಚ್ಚ ಭರಿಸಲು ದಸಂಸ ಆಗ್ರಹ

ಕೋಲಾರ,ಏ.೨೮- ಕೋವಿಡ್-೧೯ ಪಾಸಿಟಿವ್ ರೋಗಿಗಳು ಗುಣಮುಖವಾಗುವ ತನಕ ಸರ್ಕಾರವು ಉಚಿತವಾಗಿ ವೆಚ್ಚ ಭರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ವತಿಯಿಂದ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರಿಗೆ ಮನವಿ ಸಲ್ಲಿಸಲಾಯಿತು.
ಕೋರೋನಾ ಸೋಂಕಿತರಿಗೆ ಸರ್ಕಾರವೇ ಉಚಿತವಾಗಿ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಪಾಸಿಟಿವ್ ರೋಗಿಗಳಿಗೆ ೬ ಲಸಿಕೆಗಳನ್ನು ಸರ್ಕಾರದ ವತಿಯಿಂದ ಮಾತ್ರ ನೀಡುತ್ತಿದೆ. ಕೆಲವೊಂದು ರೋಗಿಗಳಿಗೆ ವೈದ್ಯರು ಕನಿಷ್ಟ ಹತ್ತು ಲಸಿಕೆಗಳನ್ನು ನೀಡಬೇಕೆಂದು ತಿಳಿಸಿದ್ದಾರೆ. ಆದರೆ ಅದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳನ್ನು ಕೇಳಿದರೆ ಸರ್ಕಾರವು ನಮಗೆ ೬ ಲಸಿಕೆಗಳನ್ನು ಮಾತ್ರ ನೀಡಲು ಆದೇಶ ನೀಡಿರುತ್ತದೆ. ನಾವು ಕೊಡಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆಂದರು. ರೋಗಿಗಳ ಸ್ಥಿತಿಯು ತುಂಬಾ ಗಂಭೀರವಾಗಿದ್ದು, ರೋಗಿಯ ಸಂಬಂಧಿಕರು ಖಾಸಗಿ ಔಷಧಿ ಅಂಗಡಿಗಳಲ್ಲಿ ಕೇಳಿದರೆ ನಮ್ಮಲ್ಲಿ ಲಭ್ಯವಿಲ್ಲ ಎಂದು ಹೇಳುತ್ತಾರೆ. ಇನ್ನು ಕೆಲವು ಔಷಧಿ ಮಳಿಗೆಯ ಮಾಲಿಕರು ಅಕ್ರಮವಾಗಿ ೨೦ ಸಾವಿರದಿಂದ ೩೦ ಸಾವಿರವರೆಗೂ ಮಾರಾಟ ಮಾಡುತ್ತಿದ್ದಾರೆ. ಈ ಲಸಿಕೆಯ ಬೆಲೆ ೪೮೦೦/- ರೂ. ಆಗಿರುತ್ತದೆ. ಇದನ್ನೆ ಬಂಡವಾಳ ಮಾಡಿಕೊಂಡು ಕೆಲವು ಔಷಧಿ ಮಳಿಗೆ ಮಾಲೀಕರು ಬಡವರು, ಸಾಮಾನ್ಯ ವರ್ಗದವರನ್ನು ಗುರಿಯಾಗಿಸಿಕೊಂಡು ಹಣ ಮಾಡಲು ಮುಂದಾಗಿರುವುದು ಖಂಡನೀಯ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ಜಿಲ್ಲೆಯಲ್ಲಿ ಸಾವಿನ ಪ್ರಮಾಣಗಳು ಹೆಚ್ಚಳವಾಗುತ್ತಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಇದುವರೆಗೂ ಜಿಲ್ಲೆಯ ಯಾವುದೇ ಆಸ್ಪತ್ರೆಗೆ ಭೇಟಿ ನಿಡಲ್ಲ, ಬದಲಿಗೆ ಆರೋಗ್ಯ ಸಿಬ್ಬಂದಿಗೆ ಅಗತ್ಯವಿರುವ ಸೌಭ್ಯ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇನ್ನು ಕರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವಲ್ಲಿಯೂ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಗ್ರಾಮಗಳಲ್ಲಿಯೂ ಕೂಡ ಕೊರೊನ ಸೋಂಕು ಹೆಚ್ಚಳವಾಗಿದೆ. ಗ್ರಾಮೀಣ ಭಾಗಗಳಲ್ಲಿ ಸೋಂಕು ತಡೆಗಟ್ಟುವಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಜನರು ಭಯಬೀತರಾಗುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕೊರೋನಾ ಸೋಂಕು ತಡೆಗಟ್ಟುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕೂಡಲೇ ಅಧಿಕಾರಿಗಳುಎಚ್ಚೆತ್ತುಕೊಳ್ಳುವಂತೆ ಕ್ರಮ ವಹಿಸಿಬೇಕೆಂದು ದೂರಿದರು.
ಆದ್ದರಿಂದ ತಾವುಗಳು ಕೂಡಲೇ ಕೋರೋನಾ ಸೋಂಕಿತ ವ್ಯಕ್ತಿ ಸಂಪೂರ್ಣವಾಗಿ ಗುಣಮುಖವಾಗುವ ತನಕ ಸರ್ಕಾರವೇ ಎಲ್ಲಾ ಲಸಿಕೆಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು ಹಾಗು ಕರ್ತವ್ಯ ಲೋಪವೆಸಗಿರುವ ತಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಿಯೋಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಂಘಟನಾ ಸಂಚಾಲಕ ಮೇಡಿಹಾಳ ಎಂ. ಚಂದ್ರಶೇಖರ್, ಕೋಲಾರ ಜಿಲ್ಲಾ ಸಂಚಾಲಕ ವಕ್ಕಲೇರಿ ಶಂಕರಪ್ಪ, ಕೋಲಾರ ತಾಲೂಕು ಸಂಚಾಲಕ ವಕ್ಕಲೇರಿ ಬಾಬು (ಶ್ರೀಧರ್ ಮೂರ್ತಿ ಆರ್), ಕೋಲಾರ ಆರ್.ಪಿ.ಐ (ಕೆ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉರಿಗಿಲಿ ಆನಂದ್ ಆರ್, ಕೂತಾಂಡಹಳ್ಳಿ ಮುರಳಿ, ತಿರುಮಲಕೊಪ್ಪ ಟೈಗರ್ ಮಂಜು, ವಕ್ಕಲೇರಿ ಮಂಜುನಾಥ್, ಮೇಡಿಹಾಳ ಹೆಚ್ ಮುನಿವೆಂಕಟಪ್ಪ, ಇನ್ನಿತರರು ಉಪಸ್ಥಿತರಿದ್ದರು.