ಸೋಂಕಿತರ ಮನೆಗೆ ರೆಡ್ ಟೇಪ್

ಬೆಂಗಳೂರಿನಲ್ಲಿ ಮೈಕ್ರೊ ಕಂಟೈನ್ಮೆಂಟ್ ಜಾರಿ, ಸೋಂಕಿತರ ಓಡಾಟಕ್ಕೆ ನಿರ್ಬಂಧ ಬೆಂಗಳೂರು,ಮೇ ೨೬- ಬೆಂಗಳೂರಿನಲ್ಲಿ ಕೊರೊನಾ ನಿಗ್ರಹಕ್ಕೆ ಮೈಕ್ರೊ ಕಂಟೈನ್ಮೆಂಟ್ ಝೋನ್‌ಗಳನ್ನು ಗುರುತಿಸಿ ಸೋಂಕಿತರ ಮನೆಗಳ ಮುಂದೆ ರೆಡ್ ಟೇಪ್ ಅಂಟಿಸುವ ಮೂಲಕ ಬಿಬಿಎಂಪಿ ಮನೆ ಮನೆ ಸೀಲ್‌ಡೌನ್ ಕಾರ್ಯಕ್ಕೆ ಮುಂದಾಗಿದೆ.
ಮೊದಲನೆ ಅಲೆಯಲ್ಲಿ ಬಿಬಿಎಂಪಿ ಸೋಂಕಿತರ ಮನೆ ಮತ್ತು ಅವರು ವಾಸವಿದ್ದ ರಸ್ತೆಗಳನ್ನು ಸೀಲ್‌ಡೌನ್ ಮಾಡುತ್ತಿತ್ತು, ಆದರೆ ೨ನೇ ಅಲೆಯಲ್ಲಿ ಸೀಲ್‌ಡೌನ್ ಕಾರ್ಯಕ್ಕೆ ತಿಲಾಂಜಲಿ ನೀಡಲಾಗಿತ್ತು. ಇದರಿಂದ ಯಾರಿಗೆ ಸೋಂಕು ಬಂದಿದೆ. ಸೋಂಕಿತರು ಮನೆಯಿಂದ ಹೊರ ಬಂದು ಓಡಾಡುತ್ತಿದ್ದಾರೆಯೇ ಇಲ್ಲವೇ ಎಂಬುದೇ ಗೊತ್ತಾಗುತ್ತಿರಲಿಲ್ಲ. ಹೀಗಾಘಿ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿದ್ದವು.
ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಈಗ ಸೋಂಕಿತರ ಮನೆಯನ್ನು ಸೀಲ್‌ಡೌನ್ ಮಾಡಿ ಮನೆಯಿಂದ ಯಾರೂ ೧೪ ದಿನಗಳ ಕಾಲ ಹೊರ ಬರದಂತೆ ಕಟ್ಟೆಚ್ಚರ ವಹಿಸಿದೆ. ಸೋಂಕಿತರ ಮನೆಯ ಗೇಟ್ ಇಲ್ಲವೆ ಬಾಗಿಲಿಗೆ ರೆಡ್ ಟೇಪ್‌ಗಳನ್ನು ಇಂಟು ಮಾರ್ಕ್‌ನಂತೆ ಅಂಟಿಸಿ ಮೈಕ್ರೊ ಕಂಟೈನ್ಮೆಂಟ್ ಎಂಬ ನೋಟಿಸನ್ನು ಅಂಟಿಸಲಾಗುತ್ತದೆ.
ಮನೆಗಳನ್ನು ರೆಡ್ ಟೇಪ್‌ನಿಂದ ಸೀಲ್‌ಡೌನ್ ಮಾಡುವುದರಿಂದ ಸೋಂಕು ತಗಲಿರುವವರನ್ನು ಗುರುತಿಸಲು ಸಾಧ್ಯವಾಗುತ್ತದೆ ಹಾಗೂ ಸೋಂಕಿತರು ರಸ್ತೆಗಿಳಿಯದಂತೆ ನಿರ್ಬಂಧ ವಿಧಿಸಲು ಸುಲಭವಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗಳ ಈ ಸೀಲ್‌ಡೌನ್‌ನಿಂದ ಅಕ್ಕಪಕ್ಕದವರೂ ಸಹ ಸೋಂಕಿತರ ಬಗ್ಗೆ ಜಾಗೃತೆ ವಹಿಸಲು ನೆರವಾಗುತ್ತದೆ. ಈ ಪ್ರಕ್ರಿಯೆ ಸೋಂಕು ನಿಗ್ರಹಕ್ಕೆ ಸಹಕಾರಿಯಾಗಲಿದೆ ಎಂಬುದು ಬಿಬಿಎಂಪಿ ಅಧಿಕಾರಿಗಳ ಹೇಳಿಕೆಯಾಗಿದೆ.
ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಿರುವವರಿಗೆ ಸೋಂಕು ತಗುಲಿದರೆ ಅಪಾರ್ಟ್‌ಮೆಂಟ್ ಗೇಟ್‌ಗೆ ರೆಡ್ ಟೇಪ್ ಅಂಟಿಸಿ ಇಡೀ ಕಟ್ಟಡವನ್ನೇ ಸೀಲ್‌ಡೌನ್ ಮಾಡಲಾಗುತ್ತದೆ.
ಬೆಂಗಳೂರಿನ ಕೊರೊನಾ ಹಾಟ್‌ಸ್ಪಾಟ್ ಆಗಿರುವ ಬಡಾವಣೆಗಳಲ್ಲಿ ಮೈಕ್ರೊ ಕಂಟೈನ್ಮೆಂಟ್ ಝೋನ್ ಪ್ರಕ್ರಿಯೆ ಆರಂಭವಾಗಿದ್ದು, ಬಸವನಗುಡಿ, ಪದ್ಮನಾಭ ನಗರ, ಬಿಟಿಎಂ ಲೇಔಟ್ ಸೇರಿದಂತೆ ಹಲವೆಡೆ ಸೋಂಕಿತರ
ಮನೆಗಳಿಗೆ ರೆಡ್ ಟೇಪ್ ಅಂಟಿಸಿ ೧೪ ದಿನಗಳ ಕಾಲ ಮನೆಯಿಂದ ಯಾರೂ ಹೊರಬರದಂತೆ ನೋಡಿಕೊಳ್ಳಲಾಗುತ್ತದೆ. ಸೀಲ್‌ಡೌನ್ ಆಗಿರುವ ಮನೆಯವರಿಗೆ ಅಗತ್ಯ ವಸ್ತುಗಳನ್ನು ಬಿಬಿಎಂಪಿ ಅಧಿಕಾರಿಗಳೇ ಪೂರೈಕೆ ಮಾಡುವರು.
ಸೋಂಕಿತರ ಮನೆಯವರ ಜತೆ ಬಿಬಿಎಂಪಿ ಅಧಿಕಾರಿಗಳು ಸಂಪರ್ಕದಲ್ಲಿದ್ದು ಅವರಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ಒದಗಿಸುವರು.

ಬೆಂಗಳೂರಿನಲ್ಲಿ ಸೋಂಕು ನಿಗ್ರಹಕ್ಕೆ ಮಾಸ್ಟರ್ ಪ್ಲಾನ್,

ಮನೆಗಳ ಸೀಲ್‌ಡೌನ್,

ಸೋಂಕಿತರ ಮನೆ ಬಾಗಿಲಿಗೆ ರೆಡ್ ಟೇಪ್.

೧೪ ದಿನಗಳ ಕಾಲ ಸೋಂಕಿತ ಮತ್ತು ಮನೆಯವರಿಗೆ ಕ್ವಾರಂಟೈನ್.

ಸೋಂಕಿತರ ಅಡ್ಡಾದಿಡ್ಡಿ ಓಡಾಟಕ್ಕೆ ನಿಬಂಧ.