ಸೋಂಕಿತರ ಬಡಾವಣೆ: ಕಂಟೈನ್‍ಮೆಂಟ್ ಜೋನ್‍ಗೆ

ಹನೂರು: ಮೇ.15: ತಾಲೂಕು ವ್ಯಾಪ್ತಿಯ ಗ್ರಾಮಗಳ ಯಾವುದೇ ಬಡಾವಣೆಯಲ್ಲಿ 5ಕ್ಕಿಂತ ಹೆಚ್ಚು ಕೊರೊನಾ ಸೋಂಕಿಗೆ ತುತ್ತಾದರೆ ಆ ಬಡಾವಣೆಯನ್ನು ಕಡ್ಡಾಯವಾಗಿ ಕಂಟೈನ್‍ಮೆಂಟ್ ಜೋನ್ ಎಂದು ಗುರ್ತಿಸುವುದರ ಮೂಲಕ ಇತರರಿಗೆ ಸೋಂಕು ತಗುಲದಂತೆ ಎಚ್ಚರ ವಹಿಸಬೇಕು ಎಂದು ಶಾಸಕ ಆರ್.ನರೇಂದ್ರ ಸೂಚಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಸಭಾಂಗಣದಲ್ಲಿ ಶನಿವಾರ ಕೋವಿಡ್ ನಿಯಂತ್ರಣ ಸಂಬಂಧ ಆಯೋಜಿಸಿದ್ಧ ಟಾಸ್ಕ್‍ಪೋಸ್ರ್ಕ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊರೆನಾ ಮೊದಲನೆ ಅಲೆಯಲ್ಲಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇತ್ತು. ಇದೀಗ 2ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಹೋಮ್ ಐಸೋಲೇಷನ್‍ನಲ್ಲಿ ಇರುವವರು ಚಿಕಿತ್ಸೆಗಾಗಿ ದಾಖಲಾಗಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ಹೆಚ್ಚು ಜನರು ಮೃತಪಡುತ್ತಿದ್ದಾರೆ. ಆದ್ದರಿಂದ ಹೋಮ್ ಐಸೋಲೇಷನ್‍ನಲ್ಲಿ ಇರುವವರನ್ನು ಆಸ್ಪತ್ರೆಗೆ ದಾಖಲಿಸಲು ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. ಜೊತೆಗೆ ಇತ್ತೀಚಿನ ದಿನಗಳಲ್ಲಿ ಗ್ರಾಮಗಳಲ್ಲಿ ಬಹುತೇಕ ಜನರು ಮಾಸ್ಕ್ ಧರಿಸುತ್ತಿಲ್ಲ. ಅಲ್ಲದೇ ಗುಂಪುಗೂಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಣಾಮ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಕೋವಿಡ್ ನಿಯಮ ಪಾಲಿಸದವರಿಗೆ ಪ್ರಕರಣ ದಾಖಲಿಸಿ ದಂಡ ವಿಧಿಸಬೇಕು ಎಂದು ಸೂಚಿಸಿದರು.
ಕಂಟೈನ್‍ಮೆಂಟ್ ಜೋನ್ ಗುರ್ತಿಸಿ: ಕ್ಷೇತ್ರ ವ್ಯಾಪ್ತಿಯ ಬಸಪ್ಪನ ದೊಡ್ಡಿ, ಕಾಂಚಳ್ಳಿ, ಹುತ್ತೂರು, ಮ.ಬೆಟ್ಟ, ಒಡೆಯರಪಾಳ್ಯ, ಹನೂರು ಪಟ್ಟಣ ಸೇರಿದಂತೆ ಇನ್ನಿತರೆ ಕೆಲವು ಗ್ರಾಮಗಳಲ್ಲಿ ಹೆಚ್ಚು ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು. ಆದ್ದರಿಂದ 5 ಜನರು ಕೊರೊನಾ ಸೋಂಕಿಗೆ ತುತ್ತಾಗುವ ಬಡಾವಣೆಗಳನ್ನು ಕಂಟೈನ್‍ಮೆಂಟ್ ಎಂದು ಗುರ್ತಿಸಿ ನಾಮಫಲಕ ಅಳವಡಿಸುವುದರ ಮೂಲಕ ಅಲ್ಲಿನ ಜನರಿಗೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅರಿವು ಮೂಢಿಸಬೇಕು ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಹನೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿ ಇರುವಾಗಲೇ ಹೃದಯಾಘಾತದಿಂದ ಮೃತಪಟ್ಟ ಚಾಮರಾಜನಗರ ಬೂದಂಬಳ್ಳಿ ಗ್ರಾಮದ ಹರಿಪ್ರಸಾದ್ ಅವರಿಗೆ ಮೌನಾಚರಿಸಲಾಯಿತು. ಬಳಿಕ ಪಟ್ಟಣದ ಕೋವಿಡ್ ಕೇಂದ್ರಕ್ಕೆ ತೆರಳಿ ಅಗತ್ಯ ಮಾಹಿತಿ ಪಡೆದರು.