ಸೋಂಕಿತರ ಚಿಕಿತ್ಸೆಗೆ ಮುಂದಾದ ನೌಕಾದಳದ ಆಸ್ಪತ್ರೆಗಳು

ಕಾರವಾರ ಏ 30: ಕೋವಿಡ್ ಸೋಂಕಿತರ ಚಿಕಿತ್ಸೆಗೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಅರ್ಗಾದಲ್ಲಿರುವ ಐಎನ್‍ಎಚ್‍ಎಸ್ ಪತಂಜಲಿ ಸೇರಿದಂತೆ ನೌಕಾದಳದ ಪಶ್ಚಿಮ ಕಮಾಂಡ್‍ನ ಮೂರು ಆಸ್ಪತ್ರೆಗಳು ಮುಂದಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಭಾರತೀಯ ನೌಕಾದಳದ ಸಾರ್ವಜನಿಕ ಸಂಪರ್ಕಾಧಿಕಾರಿಗಳು, ದೇಶದಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗಂಭೀರವಾಗಿ ಸೊಂಕಿತರಾಗಿರುವವರ ಚಿಕಿತ್ಸೆಗೆ ಹೆಚ್ಚಿನ ಸೌಲಭ್ಯಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಗಳಿಗೆ ನೌಕಾದಳದ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ನೌಕಾದಳ ಒಪ್ಪಿಗೆ ನೀಡಿದೆ. ಕರ್ನಾಟಕದ ಐಎನ್‍ಎಚ್‍ಎಸ್ ಪತಂಜಲಿ, ಗೋವಾದ ಐಎನ್‍ಎಚ್‍ಎಸ್ ಜೀವಂತಿ ಹಾಗೂ ಮುಂಬೈನ ಐಎನ್‍ಎಚ್‍ಎಸ್ ಸಂಧಾನಿ ಆಸ್ಪತ್ರೆಗಳು ಸಾರ್ವಜನಿಕರ ಚಿಕಿತ್ಸೆಗೆ ಲಭಿಸುವಂತೆ ಮಾಡಲಾಗಿದೆ.

ಇನ್ನು ಉತ್ತರಕನ್ನಡ ಜಿಲ್ಲೆಯ ಕಾರವಾರಲ್ಲಿ ನೌಕಾದಳದ ಅಧಿಕಾರಿಗಳು ಸುಮಾರು ಒಂದು ಸಾವಿರದ ಐದುನೂರು ವಲಸೆ ಕಾರ್ಮಿಕರಿಗೆ ಜೀವನೋಪಾಯ ವಸ್ತುಗಳ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ ಐಎನ್‍ಎಚ್‍ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಅಗತ್ಯಬಿದ್ದರೆ ಕೊವಿಡ್ ಸೊಂಕಿತರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಮುಂಬೈನಲ್ಲಿ ನೌಕಾನೆಲೆಯ ಸಮೀಪದಲ್ಲಿಯೇ ಕೊವಿಡ್ ಸೊಂಕಿತರಿಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಸೊಂಕಿತ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಚಿಕಿತ್ಡೆಗಾಗಿ ಹೋಗುವುದನ್ನು ತಡೆಯಲು ಉದ್ದೇಶಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನೌಕಾದಳದ ಅಧಿಕಾರಿಗಳು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಗೋವಾದಲ್ಲಿ ನೌಕಾದಳದ ತಂಡಗಳು ಕಳೆದ ಬಾರಿ ಅಗತ್ಯವಿದ್ದ ಸಾರ್ವಜನಿಕರಿಗೆ ಆಹಾರ ಸಾಮಗ್ರಿಗಳನ್ನು ಸಿದ್ಧಪಡಿಸಿ ಒದಗಿಸಲಾಗಿತ್ತು. ಈ ಬಾರಿಯೂ ಸಹ ಆಹಾರ ಪದಾರ್ಥ ಸಿದ್ಧಪಡಿಸಿ ಅಗತ್ಯವಿದ್ದವರಿಗೆ ಒದಗಿಸಲು ಸಿದ್ಧವಾಗಿದೆ. ಅಲ್ಲದೇ ಐಎನ್ ಎಚ್ ಎಸ್ ಜೀವಂತಿ ಆಸ್ಪತ್ರೆಯಲ್ಲಿ ಆಮ್ಲಜನಕ ಸಹಿತ ಕೆಲ ಹಾಸಿಗೆಗಳನ್ನು ಸಾರ್ವಜನಿಕ ಬಳಕೆಗೆ ಸಾಮುದಾಯಿಕ ಅಡುಗೆ ಮನೆಗಳನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.