ಸೋಂಕಿತರ ಚಿಕಿತ್ಸೆಗೆ ಖಾಸಗಿ ವೈದ್ಯರನ್ನು ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳ ಸೂಚನೆ


ಗದಗ,ಸೆ.16-: ಗದಗ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರಿಗೆ ಉತ್ತಮವಾದಂತಹ ಚಿಕಿತ್ಸೆ ಒದಗಿಸುತ್ತಿದ್ದು ಜಿಲ್ಲೆಯಲ್ಲಿನ ಕೋವಿಡ್-19 ಮರಣ ಪ್ರಮಾಣ ತಗ್ಗಿಸಲು ಹಾಗೂ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಒದಗಿಸಲು ಖಾಸಗಿ ವೈದ್ಯರ ಸಹಕಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚನೆ ನೀಡಿದರು.
ಜಿಲ್ಲೆಯ ಕೋವಿಡ್-19 ನಿಗದಿತ ಆಸ್ಪತ್ರೆ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಇಂದು ಭೇಟಿ ನೀಡಿ ಸಭೆ ಜರುಗಿಸಿ ಅವರು ಮಾತನಾಡಿದರು. ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ ಜಿಮ್ಸ ವೈದ್ಯರು, ಸಿಬ್ಬಂದಿಗಳು ಹಗಳಿರುಳು ಸೇವೆ ಒದಗಿಸುತ್ತಿರುವದು ಅಭಿನಂದನಾರ್ಹವಾಗಿದೆ ಎಂದರು. ಸೋಂಕಿತರ ಚಿಕಿತ್ಸೆಗಾಗಿ ನಿಯೋಜನೆಗೊಂಡಂತಹ ವೈದ್ಯರು ಹಾಗೂ ಅಧೀನ ಸಿಬ್ಬಂದಿಗಳಿಗೆ ಅಗತ್ಯದ ಸುರಕ್ಷಾ ಪರಿಕರಗಳ ಕೊರತೆಯಾಗದಂತೆ ನಿಗಾವಹಿಸಲು ಸೂಚನೆ ನೀಡಿದರು.
ಸೋಂಕಿನ ಲಕ್ಷಣಗಳಿಂದಾಗಿ ದಾಖಲಾಗುವ ಸೋಂಕಿತರನ್ನು ಪರಿಕ್ಷೀಸಿ ಸೋಂಕಿನ ಸಾಮಾನ್ಯ ಲಕ್ಷಣಗಳಿದ್ದರೆ ಅಂತಹವರಿಗೆ ಕೋವಿಡ್ ಕೇರ ಕೇಂದ್ರಗಳಲ್ಲಿ ಚಿಕಿತ್ಸೆ ಒದಗಿಸಬೇಕು. ಗಂಭೀರ ಸ್ವರೂಪದ ಸೋಂಕಿನ ಲಕ್ಷಣಗಳಿದ್ದಂತಹ ಸೋಂಕಿತರಿಗೆ ತುರ್ತು ನಿಗಾ ಘಟಕ, ಕೃತಕ ಉಸಿರಾಟದ ಯಂತ್ರದ ಮೇಲೆ ಚಿಕಿತ್ಸೆ ಒದಗಿಸಲು ಅಗತ್ಯದ ಕ್ರಮ ಜರುಗಿಸಬೇಕು.
ಸೋಂಕಿನಿಂದ ಗುಣಮುಖರಾದಂತಹ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಅಗತ್ಯದ ಕ್ರಮ ಜರುಗಿಸಬೇಕು. ಆಸ್ಪತ್ರೆಯಲ್ಲ್ಲಿ ರಚಿಸಲಾದ ಸಮಿತಿಯು ರೋಗಿಗಳನ್ನು ಪರಿಕ್ಷಿಸಿ ಸೋಂಕಿನಿಂದ ಗುಣಮುಖರಾಗಿದ್ದರೆ ಅಂತಹವರಿಗೆ ಅಗತ್ಯದ ಮಾರ್ಗದರ್ಶನಗಳನ್ನು ನೀಡಿ ಆಸ್ಪತ್ರೆಯಿಂದ ಕೂಡಲೇ ಬಿಡುಗಡೆಗೆ ಕ್ರಮ ಜರುಗಿಸಲು ಸೂಚಿಸಿದರು. ಕೋವಿಡ್-19 ಸಂಬಂಧಿಸಿದಂತೆ ಚಿಕಿತ್ಸೆಗಾಗಿ ಔಷದೋಪಚಾರದ ಯಾವುದೇ ಕೊರತೆ ಇರುವುದಿಲ್ಲ. ಸೋಂಕಿನಿಂದ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆಯಲ್ಲಿ ಔಷದೋಪಚಾರದ ತೊಂದರೆಯಾಗದಂತೆ ಚಿಕಿತ್ಸೆ ಒದಗಿಸಬೇಕು. ಸೋಂಕಿನ ತುರ್ತು ಪರೀಕ್ಷೆಗಾಗಿ ಬಳಸಲಾಗುವ ರ್ಯಾಪಿಡ ಆಂಟಿಜನ್ ಟೆಸ್ಟ ಕಿಟ್‍ಗಳನ್ನು ಅಗತ್ಯಕ್ಕೆ ತಕ್ಕಂತೆ ಆರೋಗ್ಯ ಇಲಾಖೆಯಿಂದ ಪಡೆದುಕೊಂಡು ಸೋಂಕಿನ ಪರೀಕ್ಷಾ ವರದಿಯನ್ವಯ ಕೂಡಲೇ ಸೋಂಕಿತರಿಗೆ ಅಗತ್ಯದ ಚಿಕಿತ್ಸೆಯನ್ನು ಒದಗಿಸಲು ಸೂಚಿಸಿದರು.
ಆಸ್ಪತ್ರೆಯಲ್ಲಿರುವ ಆಕ್ಸಿಜನ ಹಾಸಿಗೆಗಳ ಸಾಮಥ್ರ್ಯಕ್ಕಿಂತ ಹೆಚ್ಚುವರಿಯಾಗಿ 100 ಆಕ್ಸಿಜನ್ ಹಾಸಿಗೆಗಳ ಅಳವಡಿಕೆ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಿ ಸೋಂಕಿತರ ಚಿಕಿತ್ಸೆಗೆ ತೊಂದರೆಯಾಗದಂತೆ ನಿಗಾವಹಿಸಬೇಕು. ಪ್ರಸ್ತುತ ಈಗಿರುವ ಹಾಸಿಗೆಗಳ ವ್ಯವಸ್ಥೆಯನ್ನು ಇನ್ನೂ ಚೆನ್ನಾಗಿ ನಿರ್ವಹಿಸುವಂತೆ ತಿಳಿಸಿದರು.
ಸೋಂಕಿನಿಂದ ಮೃತಪಟ್ಟವರ ಶವ ಸಾಗಾಣೆಗಾಗಿ ಜಿಮ್ಸಗೆ ಒದಗಿಸಲಾದ ವಾಹನಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ವಯ, ಯಾವುದೇ ದೂರುಗಳಿಗೆ ಹಾಗೂ ವಿಳಂಭಕ್ಕೆ ಆಸ್ಪದ ನೀಡದಂತೆ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ.ಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಡದ, ಜಿಮ್ಸ ನಿರ್ದೇಶಕ ಡಾ.ಪಿ.ಎಸ್.ಭೂಸರೆಡ್ಡಿ, ಜಿಮ್ಸ ವಿವಿಧ ವಿಭಾಗಗಳ ಮುಖ್ಯಸ್ಥರು, ಖಾಸಗಿ ವೈದ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ತದನಂತರ ಜಿಮ್ಸ ಆಸ್ಪತ್ರೆಯ ಅಡುಗೆ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಸೋಂಕಿತರಿಗೆ ತಯಾರಿಸುವ ಊಟ, ಉಪಹಾರದ ವ್ಯವಸ್ಥೆಯನ್ನು ಪರಿಶೀಲಿಸಿ ಸರ್ಕಾರದ ಮಾರ್ಗಸೂಚಿಗಳನ್ವಯ ಸೋಂಕಿತರಿಗೆ ಒದಗಿಸುವ ಊಟ, ಉಪಹಾರದ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ನಿಗಾವಹಿಸಿ ಸಮಯಕ್ಕೆ ಸರಿಯಾಗಿ ಶುಚಿಯಾದ ಆಹಾರ ಪೂರೈಸಲು ಅಗತ್ಯದ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು .