ಸೋಂಕಿತರ ಆರೋಗ್ಯ ಸೇವೆಯಲ್ಲಿ ತಾರತಮ್ಯ ಡಿಕೆಶಿ ಟೀಕೆ

ಹಿರಿಯೂರು, ನ. ೨೨- ಕೋವಿಡ್ ಸೋಂಕಿತರಿಗೆ ಆರೋಗ್ಯ ಸೇವೆ ಒದಗಿಸುವ ವಿಚಾರದಲ್ಲಿ ಸರ್ಕಾರದಿಂದ ತಾರತಮ್ಯವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಹೊಸಪೇಟೆಗೆ ತೆರಳುವ ಮಾರ್ಗಮಧ್ಯೆ ಹಿರಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲೇಜುಗಳು ಆರಂಭವಾದ ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸರ್ಕಾರ ಉಚಿತವಾಗಿ ಜನರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಕೊರೊನಾ ತಡೆಯಲು ಸರ್ಕಾರ ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ.
ಆರೋಗ್ಯ ಒದಗಿಸುವ ವಿಚಾರದಲ್ಲಿ ತಾರಮತ್ಯ ಆಗುತ್ತಿದೆ ಎಂದು ಅವರು ದೂರಿದರು. ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆ ಮಾಡುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿರುವುದನ್ನು ಗಮನಿಸಿದ್ದೇನೆ. ಸರ್ಕಾರ ಈ ಬಗ್ಗೆ ಆದೇಶ ಮಾಡಲಿ, ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದು ಅವರು ಹೇಳಿ, ಬಳ್ಳಾರಿ ಜಿಲ್ಲೆ ವಿಭಜನೆಯ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸಲಿಲ್ಲ.
ಕಲ್ಯಾಣ ಕರ್ನಾಟಕದಲ್ಲಿ ಪ್ರವಾಸ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷ ಬಲವರ್ಧನೆಗಾಗಿ ಇಂದಿನಿಂದ ೪ ದಿನಗಳ ಕಾಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳುವರು.
ಬಳ್ಳಾರಿ, ರಾಯಚೂರು, ಕಲ್ಬುರ್ಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಕೆಪಿಸಿಸಿ ಅಧ್ಯಕ್ಷರು ೪ ದಿನಗಳ ಪ್ರವಾಸ ಕೈಗೊಂಡು, ತಮ್ಮ ಪ್ರವಾಸ ಸಂದರ್ಭದಲ್ಲಿ ಸ್ಥಳೀಯ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಕಾಂಗ್ರೆಸ್ ನಾಯಕರು, ಮಾಜಿ ಸಚಿವರು, ಪಕ್ಷದ ಮುಖಂಡರ ಜತೆಗೆ ಸಮಾಲೋಚನಾ ಸಭೆಗಳನ್ನು ನಡೆಸುವರು.