ಸೋಂಕಿತರ ಆರೋಗ್ಯ ಸುಧಾರಣೆಗೆ ಅಧಿಕಾರಿಗಳು ಶ್ರಮವಹಿಸಿ

ಕೆ.ಆರ್.ಪೇಟೆ: ಮೇ.01: ಪ್ರತಿಯೊಬ್ಬ ಸೋಂಕಿತನ ಆರೋಗ್ಯ ಸುಧಾರಣೆ ಮಾಡುವುದು ಆರೋಗ್ಯ ಇಲಾಖೆಯ ಕರ್ತವ್ಯವಾಗಿದ್ದು ಆ ನಿಟ್ಟಿನಲ್ಲಿ ತಾಲೂಕು ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ ತಿಳಿಸಿದರು.
ಅವರು ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಜೊತೆ ಮಾತನಾಡಿದರು.
ಕೋವಿಡ್ ಮಹಾಮಾರಿ ದಿನದಿಂದ ದಿನಕ್ಕೆ ತನ್ನ ಆಟವನ್ನು ವಿಸ್ತರಿಸುತ್ತಿದ್ದು ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಹೆಚ್ಚಾಗಲು ಸಾರ್ವಜನಿಕರ ಉದಾಸೀನತೆಯೇ ಕಾರಣವಾಗಿದ್ದು ಸಾರ್ವಜನಿಕರು ಶೀಘ್ರವಾಗಿ ಲಸಿಕೆ ಹಾಕಿಸಿಕೊಳ್ಳಬೇಕು, ಸಾಮಾಜಿಕ ಕಾಪಾಡಿಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಗ್ರಾಮೀಣ ಪ್ರದೇಶದಲ್ಲಿ ಜನರು ಗುಂಪುಗುಂಪಾಗಿ ಸೇರಬಾರದು ಇದರಿಂದಾಗಿ ಸೋಂಕು ವೇಗವಾಗಿ ಹರಡುತ್ತದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಆ ಮೂಲಕ ಕೊರೋನಾ ನಿಯಂತ್ರಣಕ್ಕೆ ಇಲಾಖೆಯೊಂದಿಗೆ ಸಹಕಾರ ನೀಡಬೇಕು.
ಕಳೆದ ಒಂದು ವಾರದಿಂದ ಬೆಂಗಳೂರು ಮುಂಬೈ ಸೇರಿದಂತೆ ಹಲವು ಕಡೆಗಳಿಂದ ಪ್ರತಿ ಹಳ್ಳಿಗಳಿಗೆ ಬಂದಿರುವ ವಲಸೆ ಜನರನ್ನು ಪತ್ತೆಹಚ್ಚಿ ಅವರುಗಳಿಗೆ ಪರೀಕ್ಷೆ ಮಾಡಿಸಬೇಕು. ಕೂಡಲೇ ಗ್ರಾಮಗಳ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಎಲ್ಲಾ ಗ್ರಾಮಗಳಿಗೂ ಕೋವಿಡ್ ಲಸಿಕೆÉ ಪಡೆಯಲು ಪ್ರೇರೇಪಣೆ ಮಾಡಬೇಕು. ಸೋಂಕಿನ ಲಕ್ಷಣವುಳ್ಳವರು ಆದಷ್ಟು ಕೋವಿಡ್ ಕೇರ್ ಸೆಂಟರ್‍ಗೆ ದಾಖಲಾಗುವ ಮೂಲಕ ಇತರರಿಗೆ ಸೋಂಕು ಹರಡದಂತೆ ನೋಡಿಕೊಳ್ಳಬೇಕು.
ಕೋವಿಡ್ ಪರೀಕ್ಷಾ ಕೇಂದ್ರಕ್ಕೆ ಭೇಟಿ
ಇದೇ ವೇಳೆ ಕೋವಿಡ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಿದರು. ಇಲ್ಲಿ ಬಂದಿರುವವರೆಲ್ಲರೂ ಸೋಂಕು ಇರುವವರಲ್ಲ. ಇದರಲ್ಲಿ ರೋಗಲಕ್ಷಣಗಳು ಇರುವವರು ಹಾಗೂ ಇಲ್ಲದಿರುವವರು ಇರುತ್ತಾರೆ ಆದ್ದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡಬಾರದು ಎಂಬ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು ಸರತಿ ಸಾಲಿನಲ್ಲಿ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ತಾಲ್ಲೂಕು ಆಡಳಿತವು ನಿಮಗೆ ಶಾಮಿಯಾನ ಹಾಕಿಸಿ ನೆರಳಿನಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದೆ. ತಮ್ಮ ಹೆಸರುಗಳನ್ನು ಕರೆದಾಗ ಬಂದು ಪರೀಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಲಸಿಕಾ ಕೇಂದ್ರಕ್ಕೆ ಭೇಟಿ
ಜಿಲ್ಲಾ ಆರೋಗ್ಯಾಧಿಕಾರಿಗಳು ಕೇಂದ್ರಕ್ಕೆ ಭೇಟಿ ನೀಡಿ ಕೋವಿಡ್ ಲಸಿಕೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು. ಲಸಿಕೆ ಬಗ್ಗೆ ಭಯ ಪಡಬೇಡಿ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ. 45 ವರ್ಷದ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ರೋಗ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ಸೋಂಕಿತರೊಂದಿಗೆ ಚರ್ಚೆ.
ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿಗಳು ಸೋಂಕಿತರೊಂದಿಗೆ ಉಟ, ವಸತಿ, ನೀರು, ಔಷಧಿ, ಮಾತ್ರೆ, ಮುಂತಾದುವುಗಳ ಕೊರತೆ ಏನಾದರೂ ಇದೆಯೇ ಎಂದು ಪ್ರಶ್ನಿಸಿ ಉತ್ತರ ಪಡೆದುಕೊಂಡರು. ರೋಗಿಗಳು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿಗಳ ಭೇಟಿಯ ವೇಳೆ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾಜಯಂತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಫಾರ್ಮಸಿ ಅಧಿಕಾರಿ ಸತೀಶ್‍ಬಾಬು, ಶುಷ್ರೂಷಕಿ ಬೇಬಿ ಸೇರಿದಂತೆ ಹಲವರು ಹಾಜರಿದ್ದರು.