ಸೋಂಕಿತರ ಅಸಹಾಯಕತೆ ದುರುಪಯೋಗ ಬೇಡ : ಜಿಲ್ಲಾಧಿಕಾರಿ

ಗದಗ ಮೇ.2: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಪ್ರಮಾಣ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಸೋಂಕಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುವ ಜನಸಾಮಾನ್ಯರು, ಬಡವರಿಗೆ ಸರಿಯಾಗಿ ಚಿಕಿತ್ಸೆ ಒದಗಿಸಬೇಕು. ಕೊರೊನ ಸೊಂಕಿತರ ಅಸಹಾಯಕತೆಯನ್ನೇ ದುರುಪಯೋಗ ಮಾಡುವುದು ಕಂಡು ಬಂದಲ್ಲಿ ಶಿಸ್ತುಕ್ರಮಕ್ಕೆ ಒಳಪಡಿಸಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಂ. ಸುಂದರೇಶ್ ಬಾಬು ಅವರು ಎಚ್ಚರಿಸಿದರು.
ಜಿಲ್ಲಾಡಳಿತ ಭವನದ ಜಿ.ಪಂ. ವಿಡಿಯೋ ಸಭಾಂಗಣದಲ್ಲಿ ಜರುಗಿದ ಕೋರೊನಾ ಸೋಂಕು ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೋಂಕು ಅಧಿಕವಾಗುತ್ತಿದ್ದಂತೆ ಜನ ತೊಂದರೆಗಳಿಗೆ ಸಿಲುಕಿದ್ದಾರೆ. ಬಡವರು, ಸಾಮಾನ್ಯರು ನೇರವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸಾ ವೆಚ್ಚ ಭರಿಸಲು ಕಷ್ಟಪಡುತ್ತಿದ್ದಾರೆ. ಅಂತಹವರ ನೆರವಿಗಾಗಿ ಸರ್ಕಾರವು ಉಚಿತ ಚಿಕಿತ್ಸೆ ಒದಗಿಸುತ್ತಿದೆ. ಈ ಉಚಿತ ಚಿಕಿತ್ಸೆಯನ್ನು ಸರ್ಕಾರಿ ವೈದ್ಯರು ಸಿಬ್ಬಂದಿಗಳು ಸರಿಯಾಗಿ ನೀಡುವ ಮೂಲಕ ಜನರ ಪ್ರಾಣ ಉಳಿವಿಗಾಗಿ ಶ್ರಮಿಸಬೇಕು ಎಂದರು.
ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಗೊಳಿಸಿರುವ ದರಕ್ಕಿಂತ ಹೆಚ್ಚು ಮೊತ್ತ ವಸೂಲಿ ಮಾಡದಂತೆ ಆರೋಗ್ಯ ಇಲಾಖಾಧಿಕಾರಿಗಳು ನಿಗಾ ವಹಿಸಬೇಕು. ಸರ್ಕಾರವು ಕೋವಿಡ್ ಸೋಂಕಿತರ ಚಿಕಿತ್ಸೆ ಹಾಗೂ ಸೋಂಕು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿಗೆ ಎಲ್ಲರೂ ಸಹಕರಿಸಬೇಕು.
ಜಿಲ್ಲೆಯಲ್ಲಿ ಸೋಂಕಿತರಲ್ಲಿ ಶೇ. 85 ಜನರು ಹೋಮ್ ಐಸೋಲೇಶನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರ ಆರೋಗ್ಯದ ಮೇಲೂ ಆರೋಗ್ಯ ಇಲಾಖೆ ಅಧಿಕಾರಿಗಳು ನಿಯಮಾನುಸಾರ ಚಿಕಿತ್ಸೆ ನೀಡಬೇಕು. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮೇಲುಸ್ತುವಾರಿ ಜವಾಬ್ದಾರಿ ಕಾರ್ಯ ನಿರ್ವಹಿಸಲು ತಿಳಿಸಿದರು.
ಸೋಂಕಿತರ ಚಿಕಿತ್ಸೆಗೆ ತಾಲ್ಲೂಕು ಆಸ್ಪತ್ರೆಯನ್ನು ಸರಿಯಾಗಿ ಪೂರ್ಣ ಪ್ರಮಾಣದಲ್ಲಿ ಬಳಕೆಮಾಡಿಕೊಳ್ಳಬೇಕು. ಹೆಚ್ಚುವರಿ ಚಿಕಿತ್ಸೆ ಅಗತ್ಯವಿದೆ ಎಂದು ಕಂಡು ಬಂದಲ್ಲಿ ಮಾತ್ರವೇ ಜಿಲ್ಲಾಸ್ಪತ್ರೆಗೆ ಸೋಂಕಿತರನ್ನು ಕಳುಹಿಸಬೇಕು. ಈ ಕುರಿತು ಡಿ.ಹೆಚ್.ಒ ಅವರು ತಾಲ್ಲೂಕುವಾರು ಬೇಟಿ ನೀಡಿ ಖುದ್ದಾಗಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಸೋಂಕಿತರ ಚಿಕಿತ್ಸೆಯ ಜೊತೆಗೆ ಅವರಿಗೆ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಊಟ ಉಪಹಾರ ಒದಗಿಸಬೇಕು. ಸೋಂಕಿತರ ಆರೋಗ್ಯ ಸ್ಥಿತಿ ಕುರಿತು ಕುಟುಂಬ ವರ್ಗದವರಿಗೆ ಮಾಹಿತಿ ನೀಡಬೇಕು.
ತಾಲ್ಲೂಕು ಆಸ್ಪತ್ರೆಗಳನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿಸಿದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡೆತರ ಕಾಯಿಲೆಗಳಿಗೆ ಚಿಕಿತ್ಸೆ ದೊರೆಯುವಂತೆ ಮಾಡಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಮಾತನಾಡಿ, ತಾಲ್ಲೂಕು ಆಸ್ಪತ್ರಗೆಳಿಗೆ ಸ್ಥಳೀಯವಾಗಿ ಅಗತ್ಯವಿರುವ ಉಪಕರಣ, ಸಾಮಗ್ರಿಗಳನ್ನು ನಿಮ್ಮ ಹಂತದಲ್ಲಿಯೇ ಖರೀದಿಸಿ ಚಿಕಿತ್ಸೆ ಒದಗಿಸಬೇಕು. ಒಟ್ಟಾರೆ ಸೋಂಕಿನ ಚಿಕಿತ್ಸೆ, ನಿಯಂತ್ರಣ ಹಾಗೂ ಲಸಿಕಾ ಕಾರ್ಯವನ್ನು ಶಿಸ್ತುಬದ್ಧವಾಗಿ ನಿರ್ವಹಿಸಬೇಕು. ಇದರಲ್ಲಿ ಅಧಿಕಾರಿಗಳ ವೈದ್ಯರ ನಿಷ್ಕಾಳಜಿ ಸಹಿಸಲಾಗದು ಎಂದರು.
ಸಭೆಯಲ್ಲಿ ಅಧಿಕಾರಿಗಳು ಉಪಸ್ಥಿತರಿದ್ದರು.