ಸೋಂಕಿತರ ಅಂತ್ಯಕ್ರಿಯೆಗೆ ತಾತ್ಕಾಲಿಕ ಸ್ಮಶಾನ ನಿರ್ಮಾಣ

ಬೆಂಗಳೂರು,ಏ.೨೨ : ಕೋವಿಡ್ ಸೋಂಕಿತರ ಅಂತ್ಯಕ್ರಿಯೆಗೆ ನಿಗದಿಯಾಗಿರುವ ಚಿತಾಗಾರಗಳಲ್ಲಿ ನಾನಾ ತೊಂದರೆಗಳು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಮಾಗಡಿರಸ್ತೆಯ ತಾವರೆಕೆರೆ ಬಳಿಯ ಕುರುಬರಹಳ್ಳಿ ಮತ್ತು ಕಿತ್ತನಹಳ್ಳಿಯಲ್ಲಿ ತಾತ್ಕಾಲಿಕ ಸ್ಮಶಾನ ನಿರ್ಮಿಸಲು ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಆರ್.ಅಶೋಕ್, ಗೋಮಾಳಕ್ಕೆಂದು ಕಾದಿರಿಸಲಾಗಿದ್ದು, ಈ ಜಾಗದಲ್ಲಿ ಮುಂದಿನ ಎರಡು ತಿಂಗಳುಗಳ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡವರ ಅಂತ್ಯ ಸಂಸ್ಕಾರ ನಡೆಸಲಾಗುವುದು. ತಕ್ಷಣವೇ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು. ಶವ ಸಂಸ್ಕಾರವನ್ನು ಉಚಿತವಾಗಿ ನಡೆಸಲಾಗುತ್ತದೆ. ಚಿತಾಗಾರದ ಮುಂದೆ ಕಾಯಲು ಸಮಸ್ಯೆ ಆಗುವವರು ಇಲ್ಲಿಗೆ ಬಂದು ಬಯಲಿನಲ್ಲಿ ಅಂತ್ಯಸಂಸ್ಕಾರ ನಡೆಸಬಹುದು. ನಗರದ ಹೆಚ್ಚುವರಿ ಶವಗಳನ್ನು ಇಲ್ಲಿ ಸಂಸ್ಕಾರ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಅಂತ್ಯಕ್ರಿಯೆಗೆ ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮಾಸ್ಕ್, ಪಿಪಿಇ ಕಿಟ್ ಒದಗಿಸಲಾಗುತ್ತದೆ. ಶವ ಸುಡಲು ಬೇಕಾದ ಸೌದೆ, ಸಾಮಗ್ರಿಗಳು, ಜನ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಒಬ್ಬರು ನೋಡಲ್ ಅಫೀಸರ್ ನೇಮಕ ಮಾಡಲಾಗುವುದು ಎಂದು ಅಶೋಕ್ ತಿಳಿಸಿದ್ದಾರೆ.

ಶವ ಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದಾಗ, ಸೋಂಕಿತರನ್ನು ಸುಟ್ಟಮೇಲೆ ವೈರಸ್ ಅಥವಾ ಫಂಗಸ್ ಏನೂ ಇರುವುದಿಲ್ಲ. ಸ್ಥಳೀಯರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಸರ್ಕಾರವೇ ಎಲ್ಲ ವ್ಯವಸ್ಥೆ ಮಾಡುತ್ತದೆ. ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಹೆಚ್ಚುವರಿ ಶವ ಇದ್ದರೆ ಮಾತ್ರ ಇಲ್ಲಿಗೆ ತರಲಾಗುವುದು ಎಂದು ಹೇಳಿ ಮನವೊಲಿಸುವಲ್ಲಿ ಸಚಿವ ಅಶೋಕ್ ಸಫಲರಾದರು.

ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇದ್ದರೆ ಇನ್ನಷ್ಟುಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತೇವೆ. ಮುಂದಿನ ೧೪ ದಿನದಲ್ಲಿ ಸೋಂಕು ಸರಪಳಿ ತುಂಡರಿಸಿದರೆ ಮುಂದೆ ಕಠಿಣ ಕ್ರಮ ಕೈಗೊಳ್ಳುವುದು ತಪ್ಪಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅತ್ಯಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು ಎಂದು ಅಶೋಕ್ ಜನರಲ್ಲಿ ಮಾಡಿದ್ದಾರೆ.

ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕಾಗಿ ಬೆಂಗಳೂರಿನಲ್ಲಿ ನಾಲ್ಕೈದು ಕಡೆ ಜಾಗ ಗುರುತಿಸಿದ್ದೇವೆ. ಎಲ್ಲ ಜಿಲ್ಲೆಗಳಲ್ಲಿಯೂ ಅನಿವಾರ್ಯವಾದರೆ ಶವ ಸಂಸ್ಕಾರಕ್ಕೆ ಜಾಗ ಗುರುತಿಸಿಡಲು ಸೂಚಿಸಲಾಗಿದೆ. ಕೆಲವರು ತಮ್ಮ ಹೊಲದಲ್ಲೇ ಅಂತ್ಯಸಂಸ್ಕಾರಕ್ಕೆ ಅವಕಾಶ ಕೇಳುತ್ತಿದ್ದು, ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಮಹಾರಾಷ್ಟ್ರ, ದೆಹಲಿಯ ಸ್ಥಿತಿ ನಮ್ಮಲ್ಲಿ ಬರಬಾರದು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಒಂದು ತಂಡವಾಗಿ ಕೆಲಸ ಮಾಡುತ್ತಿದೆ. ಎರಡೇ ದಿನದಲ್ಲಿ ಆಮ್ಲಜನಕ ಮತ್ತು ರೆಮ್‌ಡೆಸಿವಿರ್ ಚುಚ್ಚುಮದ್ದಿನ ಕೊರತೆಯ ಸಮಸ್ಯೆಯನ್ನು ನೀಗಿಸಿದ್ದೇವೆ ಎಂದು ಸಚಿವ ಅಶೋಕ್ ತಿಳಿಸಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದಾಗಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತ ಶವಗಳ ಅಂತ್ಯಸಂಸ್ಕಾರಕ್ಕೆ ನಿಗದಿಗೊಳಿಸಿದ್ದ ಶವಾಗಾರಗಳಲ್ಲಿ ಒತ್ತಡ ಕಡಿಮೆ ಆಗುವುದರ ಜೊತೆಗೆ ನಾಗರಿಕರಿಗೆ ಅನುಕೂಲವಾಗಲಿದೆ.

ಕಿತ್ತನಹಳ್ಳಿ ಹಾಗೂ ಗಿಡ್ಡೇನಹಳ್ಳಿ ಮಧ್ಯೆ ಇರುವ ಗೋಮಾಳಕ್ಕೆ ಸಚಿವರು ಹೋಗುತ್ತಿದ್ದಂತೆ, ಅಲ್ಲಿನ ಗ್ರಾಮಸ್ಥರು ಆತಂಕದಿಂದಲೇ ಜಮಾಯಿಸಿದರು. ಬೆಂಗಳೂರಿನಿಂದ ಇಲ್ಲಿಗೆ ಶವ ತಂದು ಸುಡುವುದು ಬೇಡ. ನಮ್ಮೂರಿನಲ್ಲಿ ಸ್ಮಶಾನ ಮಾಡಬೇಡಿ ಎಂದು ವಿರೋಧ ವ್ಯಕ್ತಪಡಿಸಿದರು. ಮಾತ್ರವಲ್ಲ ಮೃತ ಸೋಂಕಿತನ ಕುಟುಂಬದವರು ಶವ ಸಂಸ್ಕಾರಕ್ಕೆ ಬರ್ತಾರೆ. ಅವರ ಜೊತೆ ವೈರಸ್ ಬರುತ್ತೆ. ಸುರಕ್ಷಿತವಾಗಿರುವ ಗ್ರಾಮವನ್ನು ಹಾಳು ಮಾಡಬೇಡಿ ಎಂದು ತಾಕೀತು ಮಾಡಿದರು. ಕೊನೆಗೆ ಗ್ರಾಮಸ್ಥರ ಬಳಿ ಮಾತನಾಡಿದ ಅಶೋಕ್, ಇದು ಮಾನವೀಯತೆ ವಿಷಯ. ಕೇವಲ ಎರಡು ತಿಂಗಳು ಮಾತ್ರ ಅವಕಾಶ ಮಾಡಿಕೊಡಿ. ಮುಂದೆ ಸ್ಮಶಾನ ಇರುವುದಿಲ್ಲ ಅಂತ ಗ್ರಾಮಸ್ಥರ ಮನವೊಲಿಕೆ ಮಾಡಿದರು. ಅಶೋಕ್ ಮಾತಿಗೆ ಒಪ್ಪಿದ ಗ್ರಾಮಸ್ಥರು, ಸುರಕ್ಷಿತವಾಗಿ ಎಲ್ಲ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದರು. ಒಟ್ಟಿನಲ್ಲಿ ಶವಾಗಾರದ ಮುಂದಿನ ಕ್ಯೂ ತಡೆಯಲು ಸರ್ಕಾರ ಕೊನೆಗೂ ಎಚ್ಚೆತ್ತಿದೆ.