ಸೋಂಕಿತರು ಶೀಘ್ರವಾಗಿ ಗುಣಮುಖರಾಗುವಂತೆ ನೋಡಿಕೊಳ್ಳಿ

ಕೆ.ಆರ್.ಪೇಟೆ:ಏ:21: ಕೋವಿಡ್ ಕೇಂದ್ರಗಳು ರೋಗಿಗಳ ಸಮಸ್ಯೆಗಳಿಗೆ ಸ್ಪಂಧಿಸಿ ಸೂಕ್ತ ಕಾಲದಲ್ಲಿ ಅಗತ್ಯ ಚಿಕಿತ್ಸೆಗಳನ್ನು ನೀಡುವ ಮೂಲಕ ಸೋಂಕಿತರನ್ನು ಶೀಘ್ರವಾಗಿ ಗುಣಮುಖ ರಾಗುವಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ ತಿಳಿಸಿದರು.
ಪಟ್ಟಣದ ಪುರಸಭಾ ವ್ಯಾಪ್ತಿಯ ಹೊಸಹೊಳಲು ಕೆರೆ ಏರಿಯಲ್ಲಿರುವ ಬಿಸಿಎಂ ಹಾಸ್ಟೆಲ್‍ನಲ್ಲಿ ನೂತನವಾಗಿ ಆರಂಭವಾದ ಕೋವಿಡ್ ಕೇರ್ ಸೆಂಟರ್‍ಗೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕಿನಾದ್ಯಂತ ಪ್ರತೀದಿನ 700-800 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು ಪ್ರತೀದಿನ 25-40 ಸಂಖ್ಯೆಯ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಮೊದಲನೇ ದಿನವೇ 25 ರೋಗಿಗಳು ಕೋವಿಡ್ ಕೇಂದ್ರಕ್ಕೆ ದಾಖಲಾಗಿದ್ದಾರೆ. ಪ್ರತೀದಿನ ತಾಲ್ಲೂಕು ಕೇಂದ್ರದಲ್ಲಿಇಷ್ಟು ಪ್ರಮಾಣದ ಸೋಂಕಿತರು ಕೋವಿಡ್ ಕೇಂದ್ರಕ್ಕೆ ದಾಖಲಾದರೆ ಮುಂದಿನ ದಿನಗಳಲ್ಲಿ ರೋಗದ ತೀವ್ರತೆ ಹೆಚ್ಚಾಗಲಿದೆ. ಆದ್ದರಿಂದ ಜನರು ಅನಾವಶ್ಯಕ ತಿರುಗಾಟಗಳನ್ನು ಕೆಲವು ದಿನಗಳ ವರೆಗೆ ನಿಲ್ಲಿಸಬೇಕು. ಜನನಿಬಿಡ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಎರಡನೇ ಅಲೆಯ ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಬಹಳ ಎಚ್ಚರದಿಂದ ಇರಬೇಕಾದುದು ಅವಶ್ಯಕ. 45 ವರ್ಷದ ಮೇಲ್ಪಟ್ಟ ಎಲ್ಲರೂ ಕೊರೋನಾ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು. ಲಸಿಕೆಗೆ ಯಾವುದೇ ರೀತಿಯ ಹಣ ಇರುವುದಿಲ್ಲ. ಉಚಿತವಾಗಿ ನೀಡಲಾಗುವ ಲಸಿಕೆ ಪಡೆದು ಪೌಷ್ಟಿಕಾಂಶಗಳ ಆಹಾರ ಸೇವನೆ ಮಾಡುವ ಮೂಲಕ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್, ಡಾ.ಶಶಿಕಾಂತ್, ತಾಲ್ಲೂಕು ಬಿಸಿಎಂ ಅಧಿಕಾರಿ ಎಂ.ಎನ್.ವೆಂಕಟೇಶ್, ರಮೇಶ್, ಸಿ.ಡಿ.ಬಲರಾಮು, ರಾಘು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಹಾಜರಿದ್ದರು.