ಸೋಂಕಿತರಿಗೆ ಹಾಸಿಗೆ ನೀಡದ ಖಾಸಗಿ ಆಸ್ಪತ್ರೆ ವಿರುದ್ಧ ಕೇಸ್


ಬೆಂಗಳೂರು,ಏ.೨೬- ಕೊರೊನಾ ಸಂಕಷ್ಟ ಕಾಲದಲ್ಲಿ ಸೋಂಕಿತರಿಗೆ ಹಾಸಿಗೆ ನೀಡದ ಖಾಸಗಿ ಆಸ್ಪತ್ರೆಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸೇರಿ ೬ ಜನರ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ವೈದ್ಯಾಧಿಕಾರಿ ನಾಗೇಂದ್ರ ಕುಮಾರ್ ನೀಡಿದ ದೂರಿನ ಮೇರೆಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯ ಸಿಇಒ ಡಾ.ಡೇವಿಡ್ ಸೋನಾ, ಆಪರೇಷನ್ ಹೆಡ್ ಕಲ್ಪನಾ, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಶಾಂತಾ ಸೇರಿದಂತೆ ೬ ಮಂದಿ ವಿರುದ್ಧ ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯ್ದೆ (ಎನ್?ಡಿಎಂಎ)ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸೋಂಕಿತರು ಹೆಚ್ಚಾದ ಹಿನ್ನೆಲೆಯಲ್ಲಿ ರೋಗಿಗಳಿಗೆ ಬೆಡ್‌ಗಳ ಕೊರತೆಯಿದೆ. ಹಾಗಾಗಿ ಶೇ.೫೦ ರಷ್ಟು ಬೆಡ್‌ಗಳನ್ನು ಸೋಂಕಿತರಿಗೆ ಮೀಸಲಿರಿಸಬೇಕೆಂದು ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ತಾಕೀತು ಮಾಡಿತ್ತು. ಇದರಂತೆ ಆಸ್ಪತ್ರೆಯಲ್ಲಿರುವ ಬೆಡ್‌ಗಳಲ್ಲಿ ಅರ್ಧದಷ್ಟು ಸೋಂಕಿತರಿಗೆ ನೀಡದೆ ವಂಚಿಸಿದೆ.
ಕಳೆದ ಏ.೧೪ರಂದು ಬಿಬಿಎಂಪಿ ಕೋಟಾ ಅಡಿಯಲ್ಲಿ ಕೊರೊನಾ ಸೋಂಕಿತರೊಬ್ಬರು ಆಸ್ಪತ್ರೆ ದಾಖಲಾಗಿ ಏ.೨೦ರಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ಆದರೆ ಏ. ೨೪ವರೆಗೂ ಅಡ್ಮಿಟ್ ಆಗಿದ್ದಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. ಅದೇ ರೀತಿ ಮತ್ತೋರ್ವ ಕೊರೊನಾ ಸೋಂಕಿತ ಏ.೧೬ ಏಪ್ರಿಲ್ ರಂದು ದಾಖಲಾಗಿದ್ದರು. ಏ.೨೦ರಂದು ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರು. ಅಲ್ಲದೇ ೨.೪೯ ಲಕ್ಷ ರೂ. ಬಿಲ್ ಅಕ್ರಮವಾಗಿ ಕಟ್ಟಿಸಿಕೊಂಡಿದ್ದಾರೆ. ಬಿಬಿಎಂಪಿಗೆ ೨೫ ರಂದು ದಾಖಲಾಗಿರುವುದಾಗಿ ತೋರಿಸಿ ವಂಚಿಸಿದ್ದಾರೆ. ಇದೇ ರೀತಿ ಮೂವರಿಗೆ ಮೋಸ ಮಾಡಿ ಬೇರೆ ಕೊರೊನಾ ಸೋಂಕಿತ ವ್ಯಕ್ತಿಗಳಿಗೆ ಬೆಡ್ ನೀಡದೆ ವಂಚಿಸಿದ್ದಾರೆ ಎಂದು ನಾಗೇಂದ್ರ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.