ಸೋಂಕಿತರಿಗೆ ಜಡೆ ಹಾಕಿದ ಕಿಮ್ಸ್ ನರ್ಸ್

ಹುಬ್ಬಳ್ಳಿ, ಮೇ ೨- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈ ನಡುವೆ ಕಿಮ್ಸ್ ಆಸ್ಪತ್ರೆಯ ನರ್ಸಗಳ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ನರ್ಸ್‌ಗಳು, ದಾದಿಯರು ವಿಶೇಷ ಕಾಳಜಿ ವಹಿಸಿ ಆರೈಕೆ ಮಾಡುತ್ತಿದ್ದಾರೆ. ಸೋಂಕಿತ ಮಹಿಳೆಗೆ ಇಂಜೆಕ್ಷನ್, ಊಟ ಕೊಡುವ ಜೊತೆಗೆ ನರ್ಸ್‌ವೊಬ್ಬರು ಕೊರೊನಾ ಸೋಂಕಿತ ಮಹಿಳೆಯ ತಲೆ ಬಾಚಿ ಜಡೆ ಹಾಕಿ ಆರೈಕೆ ಮಾಡುತ್ತಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನರ್ಸವೊಬ್ಬರು ಕೊರೊನಾ ಸೋಂಕಿತ ಮಹಿಳೆಯ ತಲೆ ಬಾಚಿ, ಜಡೆ ಹಾಕುತ್ತಿರುವ ಫೋಟೋವೊಂದು ಇದೀಗ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಕೊರೊನಾ ವಿರುದ್ಧ ಹೋರಾಡುತ್ತಿರುವ ನರ್ಸ್, ದಾದಿಯರು ಸತತ ೬ ಗಂಟೆಗಳ ಕಾಲ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವುದೇ ದುಸ್ತರವಾಗಿರುವ ಸಮಯದಲ್ಲಿ ವಿಶೇಷ ಕಾಳಜಿ ವಹಿಸಿ ಮಹಿಳೆಯೊಬ್ಬರಿಗೆ ತಲೆಬಾಚಿ ಜಡೆ ಹಾಕಿರುವುದು ಎಲ್ಲೆಡೆಯಿಂದ ಮೆಚ್ಚುಗೆಗೆ ಪಾತ್ರವಾಗಿದೆ.