ಸೋಂಕಿತರಿಗೆ ಕೋವಿಡ್ ವಾರ್ ರೂಂ ಸ್ಥಾಪಿಸಿದ ಕಾಂಗ್ರೆಸ್

Covid war room was inguratted by siddu shivakumar at kpcc office

ಬೆಂಗಳೂರು,ಮೇ ೧- ಕೊರೊನಾ ಸೋಂಕಿತರ ನೆರವಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಆಂಬುಲೆನ್ಸ್ ಮತ್ತು ಕೋವಿಡ್ ವಾರ್ ರೂಂಗಳನ್ನು ಸ್ಥಾಪಿಸಿ ನೆರವಿನ ಸಹಾಯ ಹಸ್ತ ಚಾಚಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್ ಇವರುಗಳು ಆಂಬುಲೆನ್ಸ್ ಸೇವೆಗೆ ಹಸಿರು ನಿಶಾನೆ ತೋರಿದರು.
ಹಾಗೆಯೇ ಕೊರೊನಾ ಸೋಂಕಿತರಿಗೆ ನೆರವಾಗುವ ವಾರ್ ರೂಂ ಆರೋಗ್ಯ ಹಸ್ತ ಸಹಾಯವಾಣಿಗೂ ಚಾಲನೆ ನೀಡಲಾಯಿತು.
ಡಿಕೆ ಶಿವಕುಮಾರ್ ಹೇಳಿಕೆ
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜನರಿಗೆ ಸಹಾಯ ಮಾಡುವುದು ನಮ್ಮ ಸಂಕಲ್ಪ ಎಂದರು.
ಕೋವಿಡ್‌ನಲ್ಲಿ ಸರ್ಕಾರಕ್ಕೆ ಸಲಹೆ, ಸಹಕಾರ ಕೊಟ್ಟಿದ್ದೇವೆ. ನಿನ್ನೆ ನಾನು ಆಕ್ಸಿಜನ್ ಆಂಬುಲೆನ್ಸ್‌ಗೆ ದೂರವಾಣಿ ಮಾಡಿದ್ದೆ. ನನ್ನ ಮನೆಗೆ ಆಂಬುಲೆನ್ಸ್ ಬರಲು ೪೦ ನಿಮಿಷ ಆಯಿತು. ಹಾಗಾಗಿ ಆಂಬುಲೆನ್ಸ್ ಸೇವೆಗೆ ಚಾಲನೆ ಕೊಟ್ಟಿದ್ದೇವೆ. ಸೋಷಿಯಲ್ ಮೀಡಿಯಾ ವಾರ್ ರೂಂ ಮಾಡಿದ್ದೇವೆ. ಪ್ರತಿಯೊಂದು ಊರುಗಳಿಗೂ ಸೇವೆ ಒದಗಿಸಲಾಗುವುದು. ಎಲ್ಲೆಡೆ ಸೋಷಿಯಲ್ ಮೀಡಿಯಾ ವಾರಿಯರ್‍ಸ್‌ಗಳನ್ನು ನೇಮಿಸಿಕೊಳ್ಳುತ್ತೇವೆ. ಸೇವಾ ಮನೋಭಾವ ಇರುವವರು ಬರಬಹುದು. ಮಿಸ್ಡ್‌ಕಾಲ್ ಕೊಟ್ಟರೆ ನೋಂದಣಿ ಮಾಡಿಕೊಡಲಾಗುತ್ತದೆ. ನೊಂದ ಜನರ ದನಿಯಾಗುವವರಿಗೆ ಅವಕಾಶ ಎಂದರು.
ರಾಜ್ಯದಲ್ಲಿ ರೆಮಿಡಿಸಿವಿರ್ ಔಷಧಿ ಸಿಗುತ್ತಿಲ್ಲ. ಆದರೆ, ಬಿಜೆಪಿ ನಾಯಕರಿಗೆ ಡಬ್ಬದಲ್ಲಿ ತುಂಬಿಕೊಡುತ್ತಿದ್ದಾರೆ. ಔಷಧಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿ ಹಳ್ಳಿ ಜನ ಔಷಧಿಗೆ ಆನ್‌ಲೈನ್‌ನಲ್ಲಿ ಹೇಗೆ ನೋಂದಣಿ ಮಾಡಿಕೊಳ್ಳುತ್ತಾರೆ. ಸರ್ಕಾರ ಕೂಡಲೇ ಔಷಧಿ ವ್ಯವಸ್ಥೆ ಮಾಡಲಿ ಎಂದರು.
ಸರ್ಕಾರ ಬಡವರ ಪರವಾಗಿಲ್ಲ. ಈ ಸರ್ಕಾರ ಇರುವುದು ಅನುಕೂಲಸ್ತರಿಗೆ ಮಾತ್ರ. ಹಾಗಾಗಿಯೇ ನಾವೇ ಬಡವರ ಸೇವೆಗೆ ನಿಂತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಮತ್ತಿತರರು ಉಪಸ್ಥಿತರಿದ್ದರು.