ಸೋಂಕಿತರಿಗೆ ಉತ್ಯಮ ಚಿಕಿತ್ಸೆ ನೀಡಲು ಸಚಿವರ ಸೂಚನೆ

ಕೆ.ಆರ್.ಪೇಟೆ.ಏ.24:ಕೋವಿಡ್ ಸೋಂಕಿತರಿಗೆ ಉತ್ಯಮ ಚಿಕಿತ್ಸೆ ನೀಡಿ ಅವರುಗಳನ್ನು ಶೀಘ್ರವಾಗಿ ಗುಣಮುಖರನ್ನಾಗಿ ಮಾಡುವುದು ಆರೋಗ್ಯ ಇಲಾಖೆಯ ಅಧಿಕಾರಿಗಳ ಕರ್ತವ್ಯವಾಗಿದ್ದು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ತಾಲೂಕಿನ ಮಾದಾಪುರ, ಸಾರಂಗಿ,ಶೆಟ್ಟಿನಾಯಕನಕೊಪ್ಪಲು ಸೇರಿದಂತೆ ತಾಲೂಕಿನಲ್ಲಿರುವ ವಿವಿಧ ವಸತಿ ಶಾಲೆಗಳು ಹಾಗೂ ಹೊಸಹೊಳಲು ಕೆರೆಕೋಡಿ ಬಳಿಯಿರುವ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿ ಮಾತನಾಡಿದರು.
ಮಹಾಮಾರಿಯನ್ನು ನಿಯಂತ್ರಣಕ್ಕೆ ತರಲು ನಾವುಗಳು ಹಗಲು ರಾತ್ರಿ ಎನ್ನದೇ ಕೆಲಸ ಮಾಡಬೇಕಾಗಿದೆ. ಕಳೆದ ವರ್ಷದ ಅನುಭವ ನಮಗೆ ತಕ್ಕ ಪಾಠ ಕಲಿಸಿದ್ದು ಎರಡನೇ ಅಲೆಯು ಬಹಳ ಪರಿಣಾಮಕಾರಿಯಾಗಿದ್ದು ಸರ್ಕಾರ ಅಗತ್ಯ ಸಿದ್ಧತೆಗಳನ್ನು ಮಾಡಿದೆ. ತಾಲ್ಲೂಕಿನಲ್ಲಿ 3000 ಸೋಂಕಿತರು ಚಿಕಿತ್ಸೆ ಪಡೆಯಲು ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ತಾಲ್ಲೂಕು ಆಡಳಿತ ಕೊರೋನಾ ಮಹಾಮಾರಿಯ ನಿಯಂತ್ರಣಕ್ಕೆ ಟೊಂಕಕಟ್ಟಿ ಕೆಲಸ ಮಾಡುತ್ತಿದೆ.ಸಾರ್ವಜನಿಕರು ಸರ್ಕಾರದೊಂದಿಗೆ ಸಹಕರಿಸುವ ಮೂಲಕ ಕೆಲವು ದಿನಗಳ ಕಾಲ ಅನಾವಶ್ಯಕವಾಗಿ ತಿರುಗಾಟ ನಡೆಸುವುದನ್ನು ನಿಲ್ಲಿಸಬೇಕು. ಅವಶ್ಯಕತೆ ಇದ್ದಾಗ ಮಾತ್ರ ಮನೆಯ ಹೊರಗೆ ಬರಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮಾಡಬೇಕು. 45 ವರ್ಷದ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಪಡೆಯುವ ಮೂಲಕ ಕೊರೋನಾ ನಿಯಂತ್ರಣಕ್ಕೆ ತಾಲ್ಲೂಕು ಆಡಳಿತದೊಂದಿಗೆ ಸಹಕಾರ ನೀಡಬೇಕು.
ಸೋಂಕಿತರ ಚಿಕಿತ್ಸೆಗೆ ಜಿಲ್ಲಾಡಳಿತ ಸರ್ವಸನ್ನದ್ದವಾಗಿದ್ದು ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತೀ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ನಿಮ್ಮ ಸಲಹೆ ಸೂಚನೆಗಳನ್ನು ಪಾಲಿಸಲಾಗುವುದು. ಕೇಂದ್ರ ಸರ್ಕಾರ ಸಂಕಷ್ಟದಲ್ಲಿರುವ ಬಡ ಜನರಿಗಾಗಿ ಆಹಾರ ಪದಾರ್ಥಗಳನ್ನು ವಿತರಿಸುವ ಯೋಜನೆಯನ್ನು ಹಾಕಿಕೊಂಡಿದ್ದು ಇದರಿಂದ ದೇಶದ ಕೋಟ್ಯಾಂತರ ಮಂದಿಗೆ ಅನುಕೂಲವಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಶಿಲ್ದಾರ್ ಎಂ.ಶಿವಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್,ಸಚಿವರ ಆಪ್ತ ಕಾರ್ಯದರ್ಶಿ ದಯಾನಂದ್,ಬಿಸಿಎಂ ಅಧಿಕಾರಿ ವೆಂಕಟೇಶ್, ಮಿತ್ರಗಿರೀಶ್,ಅರುಣ್ ಸೇರಿದಂತೆ ಹಲವರು ಹಾಜರಿದ್ದರು.