ಸೋಂಕಿತರಿಗೆ ಆಹಾರ ಕಿಟ್, ಮಾಸ್ಕ್ ವಿತರಣೆ

ಬ್ಯಾಡಗಿ,ಮೇ30: ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಸೋಂಕನ್ನು ನಾವೆಲ್ಲರೂ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಕೊರೊನಾ ಪಾಸಿಟಿವ್ ಆಗಿ ಕೇರ್ ಸೆಂಟರ್ ಹಾಗೂ ಹೋಂಕ್ವಾರಂಟೈನ್‍ನಲ್ಲಿರುವ ಬಡ ಸೋಂಕಿತರಿಗೆ ಆಹಾರ ಕಿಟ್, ಮಾಸ್ಕ್’ಗಳನ್ನು ಕಾಂಗ್ರೇಸ್ ಪಕ್ಷದ ವತಿಯಿಂದ ವಿತರಿಸಲಾಗುತ್ತಿದೆ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ತಿಳಿಸಿದರು.

ಪಟ್ಟಣದ ತಾಲೂಕ ಕಚೇರಿಯ ಆವರಣದಲ್ಲಿ ಶನಿವಾರ ಕೊರೊನಾ ಸೋಂಕಿತ ಬಡ ಕುಟುಂಬಗಳಿಗೆ ಕಾಂಗ್ರೇಸ್ ಪಕ್ಷದ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ಉಪ ವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಅವರ ಮೂಲಕ ವಿತರಣೆ ಮಾಡಲು ತಾಲೂಕಾಡಳಿತಕ್ಕೆ ಹಸ್ತಾಂತರಿಸಿ ಮಾತನಾಡಿದ ಅವರು, ಕೋವಿಡ್ ಸೋಂಕಿನ ಹಿನ್ನಲೆಯಲ್ಲಿ ಸರ್ಕಾರದ ಲಾಕ್’ಡೌನ್ ನೀತಿಯಿಂದ ಹಲವಾರು ಬಡ ಕುಟುಂಬಗಳು, ನಿರ್ಗತಿಕರು ಬೀದಿಗೆ ಬೀಳುವಂತಾಗಿದೆ. ಆದರೆ ಅವರ ಕಷ್ಟಕ್ಕೆ ನೆರವು ನೀಡುವಲ್ಲಿ ಸರ್ಕಾರ ವಿಫಲಗೊಂಡಿದೆ ಅಲ್ಲದೇ ರಾಜ್ಯ ಮತ್ತು ದೇಶದ ಹಲವೆಡೆ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಈಗ ಎಲ್ಲಕ್ಕಿಂತ ಜನರ ಜೀವ ರಕ್ಷಣೆ ನಮಗೆ ಮುಖ್ಯವಾಗಿದೆ. ನಮ್ಮ ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡುತ್ತಿರುವ ಪ್ರತಿಯೊಂದು ಜೀವ ಉಳಿಯಬೇಕು ಎಂಬುದು ಕಾಂಗ್ರೆಸ್‍ನ ಧ್ಯೇಯವಾಗಿದೆ ಎಂದು ಹೇಳಿದ್ದಾರೆ.

ಯುವ ಮುಖಂಡರಾದ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಕೋವಿಡ್ ಸಹಾಯ ಹಸ್ತ ಹೆಸರಿನಲ್ಲಿ ಕಾಂಗ್ರೆಸ್ ಪಡೆ ಕಳೆದ ಹಲವು ದಿನಗಳಿಂದ ಸಕ್ರಿಯವಾಗಿದೆ. ಅಗತ್ಯವಿರುವ ಸೋಂಕಿತರಿಗೆ ಅಗತ್ಯ ಸೌಕರ್ಯ ಒದಗಿಸುವ ಕೆಲಸದಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದೆ. ಕೋವಿಡ್-19ರ ಎರಡನೇ ಅಲೆ ಯಾರೂ ನಿರೀಕ್ಷೆ ಮಾಡದಷ್ಟು ಪ್ರಮಾಣದಲ್ಲಿ ಜನ ಜೀವನದ ಮೇಲೆ ಅಪ್ಪಳಿಸಿ ಘಾಸಿಗೊಳಿಸಿದೆ. ಮೂರನೇ ಅಲೆಗೂ ಮುನ್ನ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಪಕ್ಷದ ವಿವಿಧ ವಿಭಾಗಗಳು ಕೋವಿಡ್ ಸೋಂಕಿತರ ರಕ್ಷಣೆಗೆ ಮುಂದಾಗಿವೆ ಎಂದರು.

ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ ಗವಿಸಿದ್ದಪ್ಪ, ಪುರಸಭೆ ಮುಖ್ಯಾಧಿಕಾರಿ ವಿ.ಎಮ್.ಪೂಜಾರ, ಪುರಸಭೆ ಸದಸ್ಯರಾದ ಶಂಕರ ಕುಸುಗೂರ, ರಫೀಕಅಹ್ಮದ್ ಮುದಗಲ್, ಮಾಜಿ ಸದಸ್ಯರಾದ ಮಂಜುನಾಥ ಭೋವಿ, ದುರಗೇಶ ಗೊಣೆಮ್ಮನವರ, ರಮೇಶ ಮೋಟೆಬೆನ್ನೂರ, ಯೂನಸಅಹ್ಮದ್ ಸವಣೂರ, ಜಗದೀಶ ಪಾಟೀಲ, ಸರ್ಫರಾಜ್ ಹೆರಕಲ್, ಹನುಮಂತಪ್ಪ ಶಿರಗಂಬಿ, ಉದಯ ಚೌಧರಿ, ಕರಿಬಸಪ್ಪ ಶಿರಗಂಬಿ, ಪರಶುರಾಮ ಗೆಜ್ಜಿಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.