ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಹಾಡಿ ರಂಜಿಸಿದ ಸಿಬ್ಬಂದಿ!

ಚಾಮರಾಜನಗರ, ಜೂ.09- ಕೊರೊನಾ ಸಂಕಷ್ಟದಲ್ಲಿ ಆತ್ಮಸ್ಥೈರ್ಯ, ಚಿಂತೆಯಿಂದ ದೂರ ಮಾಡಲು ಸಂಗೀತವೇ ದೊಡ್ಡ ಮದ್ದು. ಇದನ್ನು ಅರಿತ ನಗರಸಭೆಯು ನಗರದ ಸಿಡಿಎಸ್ ಭವನದಲ್ಲಿ ಇಂದು ಸಂಗೀತ ರಸಸಂಜೆ ಏರ್ಪಡಿಸಿತ್ತು.
ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ನಿರಾಶ್ರಿತರಿಗೆ ನಗರದ ಸಿಡಿಎಸ್ ಭವನದಲ್ಲಿ ಆಶ್ರಯ ಕಲ್ಪಿಸಿದ್ದು ಅವರ ಮನರಂಜನೆಗಾಗಿ ನಗರಸಭೆ ವತಿಯಿಂದ ಏರ್ಪಡಿಸಿದ್ದ ಸಂಗೀತ ರಸಸಂಜೆ ಕಾರ್ಯಕ್ರಮಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರು ಚಾಲನೆ ನೀಡಿ ನಿರಾಶ್ರಿತರರೊಂದಿಗೆ ಸಂಗೀತ ಗಾಯನದಲ್ಲಿ ಪಾಲ್ಗೊಂಡರು.
ತದ ನಂತರ ನಿರಾಶ್ರಿತರ ಕೇಂದ್ರದಲ್ಲಿರುವ 14 ಮಂದಿಯ ಯೋಗಕ್ಷೇಮ ವಿಚಾರಿಸಿ ಊಟವನ್ನು ಸಹ ವಿತರಿಸಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರು. ವಿಶೇಷವೆಂದರೆ ಈ ಸಂಗೀತ ರಸ ಸಂಜೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್ ಅವರು ಕೋಲುಮಂಡೆ ಜಾನಪದ ಗೀತೆಯನ್ನು ಸ್ವಾರಸ್ಯವಾಗಿ ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು.
ನಗರಸಭೆ ಆರೋಗ್ಯ ನಿರೀಕ್ಷಕ ಶರವಣ ಅವರು ಡಾ.ರಾಜ್ ಅವರ ಆಡಿಸಿ ನೋಡು ಗೀತೆ ಹಾಡಿ ರಂಜಿಸಿದರೆ, ಶಿವಪ್ರಸಾದ್ ಅವರು ಒಳಿತು ಮಾಡು ಮನುಷ ಗೀತೆ ಹಾಡಿ ಮನ ತಣಿಸಿದರು. ಕೊರೊನಾ ಜಾಗೃತಿ ಮೂಡಿಸುವ ಸುರಕ್ಷಾ ಪಡೆ ಸ್ವಯಂ ಸೇವಕರು, ಯೋಜನಾ ನಿರ್ದೇಶಕ ಕೆ.ಸುರೇಶ್ ಹಾಗೂ ಆರೋಗ್ಯ ನಿರೀಕ್ಷಕರುಗಳಾದ ಶಿವಪ್ರಸಾದ್, ಮಹಾದೇವನಾಯಕ ಅವರುಗಳು ಸಹ ಗಾಯನ ಕಲಾವಿದರಾಗಿ ಗಮನ ಸೆಳೆದರು.
ಸುರಕ್ಷಾ ಪಡೆಯ ಗುರುರಾಜ್, ಶಿವರಾಜ್, ನಾಗೇಶ್ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮವು ಒಂದು ಗಂಟೆಗೂ ಅಧಿಕ ಸಮಯ ಶ್ರೀ ಮಲೆಮಹದೇಶ್ವರ, ಬಿಳಿಗಿರಿರಂಗನಾಥಸ್ವಾಮಿ ಭಕ್ತಿಗೀತೆ ಹಾಗೂ ಜಾನಪದ ಗೀತೆಗಳನ್ನು ಹಾಡುವ ಮೂಲಕ ನಿರಾಶ್ರಿತರ ಬೇಸರ ದೂರ ಮಾಡಿದರು. ನಿರಾಶ್ರಿತರ ಭವನದಲ್ಲಿರುವ 14 ಹೆಚ್ಚು ಮಂದಿ ನಿರಾಶ್ರಿತರು ರಸಸಂಜೆಗೆ ತಲೆದೂಗಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಪೌರಾಯುಕ್ತ ಕರಿಬಸವಯ್ಯ, ಕೌಶಾಲಾಭಿವೃದ್ಧಿ ಮಿಷನ್‍ನ ಸಹಾಯಕ ನಿರ್ದೇಶಕ ಮಲ್ಲೇಶ್, ಡೇ ನಲ್ಮ್ ವ್ಯವಸ್ಥಾಪಕ ಅಮ್ಜತ್ ಪಾμÁ, ನಗರಸಭೆ ಸಮುದಾಯ ಸಂಘಟನಾಧಿಕಾರಿ ವೆಂಕಟನಾಯ್ಕ, ಮಹದೇವಸ್ವಾಮಿ, ಆರೋಗ್ಯ ನಿರೀಕ್ಷಕ ಮಂಜು, ಸೇರಿದಂತೆ ನಗರಸಭೆಯ ಸಿಬ್ಬಂದಿಗಳು ಹಾಜರಿದ್ದರು.