ಸೋಂಕಿತರಿಂದ ತುಂಬಿ ತುಳುಕಿರುವ ಆಸ್ಪತ್ರೆಗಳು


ಬೆಂಗಳೂರು, ಏ.೨೩-ಎರಡನೇ ಅಲೆಯ ಕೋವಿಡ್ ೧೯ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೆ ಮತ್ತೊಂದೆಡೆ ಬೆಂಗಳೂರಿನ ಬಹುತೇಕ ಆಸ್ಪತ್ರೆಗಳ ಮುಂಭಾಗ ’ಹಾಸಿಗೆಗಳೇ ಇಲ್ಲ’ (ನೋ-ಬೆಡ್) ಎನ್ನುವ ಫಲಕಗಳು ರಾರಾಜಿಸುತ್ತೀರುವುದು ಭೀತಿ ಹುಟ್ಟಿಸಿದೆ.
ಇಲ್ಲಿನ ಶಿವಾಜಿನಗರದ ಚರಕ ಆಸ್ಪತ್ರೆಯಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ೧೫೦ ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗಿತ್ತು. ಆದರೆ, ಕ್ಷಣಮಾತ್ರದಲ್ಲಿ ಎಲ್ಲವೂ ತುಂಬಿದ್ದು, ಪ್ರವೇಶ ದ್ವಾರದ ಹೊರಗಡೆ ’ಹಾಸಿಗೆಗಳೇ ಇಲ್ಲ’ (ನೋ-ಬೆಡ್) ಎನ್ನುವ ಪಾಲಕವೇ ಅಂಟಿಸಲಾಗಿದೆ.
ಈ ಒಂದು ಆಸ್ಪತ್ರೆ ಮಾತ್ರವಲ್ಲದೆ, ನೂರಾರು ಆಸ್ಪತ್ರೆಗಳು ಇದೇ ಮಾದರಿಯಲ್ಲಿ ಚೀಟಿ ಅಂಟಿಸಿದ್ದು, ಆ?ಯಂಬುಲೆನ್ಸ್ ಗಳನ್ನು ಒಳಗಡೆ ಕರೆಯುತ್ತಿಲ್ಲ ಎನ್ನುವ ಆರಂಭ ಕೇಳಿಬಂದಿದೆ. ಮತ್ತೊಂದೆಡೆ ರೋಗಗಳಿಗೆ ಮಾಹಿತಿ ಇಲ್ಲದಂತೆ ಆಗಿದ್ದು, ಮನೆಯಲ್ಲೇ ಇರುವಂತೆ ಆಗಿದೆ.
ಪ್ರಭಾವಿಗಳ ಕಾಟ?: ಸೌಮ್ಯ ಸ್ವಭಾವದ ಲಕ್ಷಣಗಳು ಕಾಣಿಸಿಕೊಂಡರೂ ಕೆಲ ಪ್ರಭಾವಿಗಳು ಪರಿಚಯ ಬಳಸಿಕೊಂಡು ಕೋವಿಡ್ ಆಸ್ಪತ್ರೆಗೆ ದಾಖಲಾಗುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದೆ. ಹಾಸಿಗೆಗಳ ಕೊರತೆ ಉಂಟಾಗಲು ಇದೂ ಕಾರಣ ಎನ್ನಲಾಗಿದೆ.
ಸಣ್ಣದಾಗಿ ಕೆಮ್ಮು, ನೆಗಡಿ ಕಾಣಿಸಿಕೊಂಡರೂ ತಮಗಿರುವ ‘ಪ್ರಭಾವ’ ಬಳಸಿಕೊಂಡು ಅನೇಕರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮುಂಜಾಗ್ರತೆಯ ನೆಪದಲ್ಲಿ ಆಸ್ಪತ್ರೆಗಳಲ್ಲಿ ಬಂದು ಮಲಗುತ್ತಿದ್ದಾರೆ. ತೀರಾ ಅಗತ್ಯವಿರುವ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಇದರಿಂದ ತೊಂದರೆಯಾಗುತ್ತಿದೆ. ಹಾಸಿಗೆಗಳ ಕೃತಕ ಅಭಾವ ಸೃಷ್ಟಿಗೂ ಇದು ಕಾರಣವಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ವ್ಯವಸ್ಥೆ ಬರಬೇಕು: ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ತರಬೇಕು. ಪರಿಣಿತ ವೈದ್ಯರ ತಂಡವೊಂದನ್ನು ರಚಿಸಿ, ಅದರ ಮೂಲಕ ಈ ಕಾರ್ಯ ಮಾಡಬೇಕು’ ಎಂಬ ಸಲಹೆಯನ್ನು ತಜ್ಞರು ನೀಡುತ್ತಾರೆ.
ಸೋಂಕಿತರಾದವರನ್ನೆಲ್ಲ ಆಸ್ತತ್ರೆಗೆ ದಾಖಲು ಮಾಡಿಕೊಳ್ಳುತ್ತಿರುವುದರಿಂದ ತೊಂದರೆಯಾಗುತ್ತಿದೆ. ಅನ್ಯರೋಗದಿಂದ ಬಳಲುತ್ತಿರುವವರಿಗೆ ಕೋವಿಡ್ ದೃಢಪಟ್ಟಿದ್ದರೆ, ಉಸಿರಾಟಕ್ಕೆ ತೊಂದರೆಯಾಗಿದ್ದರೆ ಅಂಥವರನ್ನು ಮಾತ್ರ ದಾಖಲು ಮಾಡಿಕೊಳ್ಳುವಂತಾದರೆ ಹಾಸಿಗೆ ಸಮಸ್ಯೆ ಶೇ ೫೦ರಷ್ಟು ಕಡಿಮೆ ಆಗುತ್ತದೆ’ ಎಂದೂ ಅವರು ಅಭಿಪ್ರಾಯಪಟ್ಟರು.
ಅಲ್ಲದೆ, ಬಿಬಿಎಂಪಿ ಕೊರೋನಾ ಹಾಸಿಗೆ ನಿರ್ವಹಣಾ ವ್ಯವಸ್ಥೆಯ ಪ್ರಕಾರ ಬೆಂಗಳೂರಿನಲ್ಲಿ ಬಹುತೇಕ ಐಸಿಯು ಬೆಡ್ ಭರ್ತಿಯಾಗಿದ್ದು ಬೆರಳೆಣಿಕೆಯಷ್ಟು ಬೆಡ್‌ಗಳು ಮಾತ್ರ ಲಭ್ಯವಿವೆ. ಸೋಂಕು ಏರುಗತಿಯ ಆರಂಭಿಕ ಹಂತದಲ್ಲೇ ಈ ಪರಿಸ್ಥಿತಿ ನಿರ್ಮಾಣವಾದರೆ, ಮುಂದಿನ ವಾರದಿಂದ ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಈ ವೇಳೆ ಸೋಂಕಿತರ ಪರಿಸ್ಥಿತಿ ಏನು ಎಂಬ ಭೀತಿ ಮನೆ ಮಾಡಿದೆ.
೧೧ ಸಾವಿರ ಬೆಡ್ ಗುರಿ
ಶೀಘ್ರದಲ್ಲೇ ಹನ್ನೊಂದು ಸಾವಿರ ಬೆಡ್ ಗಳು ಲಭ್ಯ ಆಗಬೇಕು. ಈ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, ಈಗಾಗಲೇ ೭ ಸಾವಿರಕ್ಕೂ ಅಧಿಕ ಬೆಡ್ ಗಳು ಲಭ್ಯವಾಗಿದೆ.
-ಗೌರವ್ ಗುಪ್ತ, ಬಿಬಿಎಂಪಿ ಮುಖ್ಯ ಆಯುಕ್ತ