ಸೋಂಕಿತರನ್ನು ರಕ್ಷಿಸಿ ಜೀವ ಉಳಿಸಿ: ಕಮ್ಯುನಿಸ್ಟ್ ಪಕ್ಷದಿಂದ ಪ್ರತಿಭಟನೆ

ಕಲಬುರಗಿ,ಮೆ.18:ನಗರದ ದೇವಿ ನಗರದ ಬಡಾವಣೆಯಲ್ಲಿ ಮಂಗಳವಾರ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಆನ್‍ಲೈನ್ ಮೂಲಕ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ್ ಮಾಡಿಯಾಳ್ ಅವರು ಮಾತನಾಡಿ, ಕೋವಿಡ್ ನಿಯಂತ್ರಣ ಮಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದಲ್ಲಿ ವೆಂಟಿಲೇಟರ್, ಆಮ್ಲಜನಕ, ಹಾಸಿಗೆಗಳ ಕೊರತೆಯಿಂದ ಸರಿಯಾಗಿ ಚಿಕಿತ್ಸೆ ಇಲ್ಲದೇ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ ಎಂದು ಆರೋಪಿಸಿದರು.
ರೋಗಿಯ ಜೀವ ಉಳಿಸುವುದರೊಂದಿಗೆ ಜೀವ ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರು ಹಲವಾರು ಬಾರಿ ನಗರಕ್ಕೆ ಆಗಮಿಸಿ ವೀಕ್ಷಣೆ ಮಾಡುತ್ತಿರುವುದು ಸ್ವಾಗತಾರ್ಹ. ಆದಾಗ್ಯೂ, ತಾಲ್ಲೂಕು ಮಟ್ಟದ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಕೇಂದ್ರಗಳನ್ನು ಪ್ರಾರಂಭಿಸಿ ಸರ್ಕಾರ ಜನರ ನೆರವಿಗೆ ಬರಬೇಕು ಎಂದು ಅವರು ಒತ್ತಾಯಿಸಿದರು.
ನಗರದಲ್ಲಿರುವ ಹಲವಾರು ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಸರಿಯಾದ ಚಿಕಿತ್ಸೆ ನೀಡುವಂತೆ ಆದೇಶಿಸಬೇಕು. ಎರಡನೇ ಅಲೆ ಅತೀ ತೀವ್ರ ಗತಿಯಿಂದ ಹರಡುತ್ತಿರುವುದರಿಂದ ಸೋಂಕು ತಡೆಗಟ್ಟುವ ಪ್ರಯತ್ನ ಮಾಡಬೇಕು. ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಹರಡುತ್ತಿರುವ ಸೋಂಕು ತಡೆಗಟ್ಟಬೇಕು ಎಂದು ಅವರು ಆಗ್ರಹಿಸಿದರು.
ಬಡ ಕೂಲಿ ಕಾರ್ಮಿಕರ, ಕಟ್ಟಡ ಕಾರ್ಮಿಕರ, ಆಟೋ ಚಾಲಕರ ಕುಟುಂಬದ ನಿರ್ವಹಣೆಗಾಗಿ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ರೂ.ಗಳಂಗತೆ ಪರಿಹಾರ ಧನ ನೀಡುವಂತೆ, ಪ್ರತಿಯೊಂದು ಕೋವಿಡ್ ಆಸ್ಪತ್ರೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ರೋಗಿಯ ಸಂಬಂಧಿಕರಿಗೆ ನೋಡುವ ಹಾಗೆ ಮತ್ತು ರೋಗಿಗೆ ಧೈರ್ಯ ತುಂಬಿ ರೋಗ ಮುಕ್ತ ಕಾರ್ಯ ಪಾರದರ್ಶಕವಾಗಿ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲಾ ಸಹ ಕಾರ್ಯದರ್ಶಿ ಪ್ರಭುದೇವ್ ಯಳಸಂಗಿ, ಎಐವೈಎಫ್ ಜಿಲ್ಲಾಧ್ಯಕ್ಷರೂ ಆದ ನ್ಯಾಯವಾದಿ ಹಣಮಂತರಾಯ್ ಎಸ್. ಅಟ್ಟೂರ್, ಅಲಿಸಾಬ್ ಸಿಂದಗಿ, ರಘುನಂದನ್ ಕುಲಕರ್ಣಿ, ಸುರೇಶ್ ಮಸಳಿ ಮುಂತಾದವರು ಪಾಲ್ಗೊಂಡಿದ್ದರು.