ಸೋಂಕಿಡಿ ನಿರ್ಲಕ್ಷ್ಯ ಸಲ್ಲ, ಭಯ ಬೇಡ, ಜಾಗೃತಿಯಿಂದ ನಿಯಮ ಪಾಲಿಸಿ: ಶಾಸಕ ಡಾ.ದೇವಾನಂದ ಚವ್ಹಾಣ

ವಿಜಯಪುರ, ಮೇ.28-ಮಹಾಮಾರಿ ಕೋವಿಡ್ ಎರಡನೇ ಅಲೆಯ ಕರಾಳ ಬಾಹುವಿನಿಂದ ಗ್ರಾಮೀಣ ಪ್ರದೇಶಗಳು ಇಂದು ನಲುಗುತ್ತಿವೆ. ಸೋಂಕು ಮಿಂಚಿನ ವೇಗದಲ್ಲಿ ವ್ಯಾಪಿಸುತ್ತಾ ಜನ ಸಮೂಹವನ್ನು ಕೆಂಗೆಡಿಸಿ ನೆಮ್ಮದಿ ಹಾಳುಗೆಡವಿದೆ. ಇದಕ್ಕೆ ನಮ್ಮ ಆಜಾಗರೂಕತೆಯೂ ಕಾರಣ.ಜನತೆ ಸುಖಾ ಸುಮ್ಮನೆ ಗುಂಪು ಗುಂಪಾಗಿ ಸೇರುವುದನ್ನು ಮಾಡಬಾರದು. ಜಾತ್ರೆ, ಮದುವೆ, ಮುಂಜಿಗಳನ್ನು ನಿಲ್ಲಿಸಬೇಕು. ಕಡ್ಡಾಯ ಕೋವಿಡ್ ನಿಯಮಗಳ ಪಾಲನೆಗೆ ಎಲ್ಲರೂ ಬದ್ದವಾಗಿ ನಡೆದುಕೊಳ್ಳಬೇಕು ಎಂದು ನಾಗಠಾಣ ಶಾಸಕ ಡಾ,ದೇವಾನಂದ್ ಚವ್ಹಾಣ ಕೇಳಿಕೊಂಡರು.
ವಿಜಯಪುರ ತಾಲ್ಲೂಕಿನ ಗುಣಕಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವೈದ್ಯರ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಪರಿಸ್ಥಿತಿ ಬಹಳಷ್ಟು ಸೂಕ್ಷ್ಮ ಹಾಗು ಸೂಚ್ಯವಾಗಿದೆ. ಇದನ್ನು ಎಲ್ಲರೂ ಗಮನಿಸಿ ಜಾಗೃತೆಯಿಂದಿರಬೇಕು ಎಂದರು.
ಸಾರ್ವಜನಿಕರು ತಮ್ಮ ಆರೋಗ್ಯ ರಕ್ಷಣೆ ಬಗ್ಗೆ ತಾವೇ ಮುತುವರ್ಜಿ ವಹಿಸಿಕೊಳ್ಳಲು ಮುಂದಾಗಬೇಕು.ಈ ಸಂದರ್ಭದಲ್ಲಿ ನಿರ್ಲಕ್ಷಿಸಿದರೆ ತೊಂದರೆ ಅನುಭವಿಸಬೇಕಾದೀತು. ಅಲ್ಲದೇ ಕುಟುಂಬದ ಸದಸ್ಯರು ಸಹ ತೀವ್ರ ಸ್ವರೂಪದ ಕಷ್ಟ ಮತ್ತು ಆರೋಗ್ಯ ಸಮಸ್ಯೆಗೆ ಒಳಗಾಗಿ ಮಾನಸಿಕ ಖಿನ್ನತೆಗೆ ತುತ್ತಾಗಿ ನರಳಾಡಬೇಕಾದೀತು ಎಂದು ಎಚ್ಚರಿಸಿದ ಶಾಸಕರು, ಕೋವಿಡ್ ಸಾಂಕ್ರಾಮಿಕ ರೋಗ ಅಮೂಲ್ಯ ಜೀವ ಬಲಿ ತಗೆದುಕೊಳ್ಳುತ್ಕಲ್ಲಿದೆ. ಹೀಗಾಗಿ ನಮಗೆಲ್ಲ ಇಂದು ಮನೋಬಲ ಪರೀಕ್ಷೆಯ ಕಾಲ ಒದಗಿ ಬಂದಿದ್ದು ಅದನ್ನು ಸಮರ್ಥವಾಗಿ ಎದುರಿಸಿ, ನಿರ್ವಹಿಸಿ ಕರೋನಾ ಮಾರಿ ಎದುರು ಗೆಲ್ಲಬೇಕಾಗಿದೆ. ನನ್ನ ಸೇವಾ ಕ್ಷೇತ್ರದಲ್ಲಿಗ ನಾನು ವೈಯಕ್ತಿಕವಾಗಿ ಹಗಲಿರುಳು ಕರೋನಾ ಸೋಂಕಿನ ಕುರಿತಾದ ಜಾಗೃತಿ ಜನರಲ್ಲಿ ಮೂಡಿಸಲು ಶ್ರಮಿಸುತ್ತಲ್ಲಿದ್ದೆನೆ. ಮೊದಲು ಆದ್ಯತೆ ನೀಡುತ್ತಿರುವುದು ಜನಕಲ್ಯಾಣ ಆರೋಗ್ಯ ವ್ಯವಸ್ಥೆ ಪರವಾಗಿ. ಎಲ್ಲರೂ ತಮ್ಮ ತಮ್ಮ ಸೇವಾ ಕಾಯಕ ಮಾನವೀಯತೆಯ ಗುಣದಿಂದ ನಿರ್ವಹಿಸಲು ಮುಂದಾಗಬೇಕು ಎಂದರು.
ಮೊದಲನೇ ಅಲೆಗಿಂತ ಎರಡನೇ ಅಲೆಯಲ್ಲಿ ಜೀವಗಳು ಹೆಚ್ಚು ಕಣ್ಮರೆಯಾಗಿವೆ. ಇದಕ್ಕಾಗಿ ಜನರು ಜಾಗೃತಿ ವಹಿಸಬೇಕು.ಲಸಿಕೆಯನ್ನು ಎಲ್ಲರೂ ಪಡೆದುಕೊಳ್ಳುವ ಮೂಲಕ ಜೀವ ರಕ್ಷಿಸಿಕೊಳ್ಳಬೇಕು. ಕರೋನಾ ಪಾಸಿಟಿವ್ ಬಂದರೆ ಭಯ,ಆತಂಕದಿಂದ ಮುಚ್ಚಿಡಬಾರದು. ಯಾವುದೇ ಕಾರಣಕ್ಕೂ ಇಂಥ ಲೋಪ ಯಾರು ಮಾಡಬಾರದು. ಅಕ್ಕಪಕ್ಕದವರಿಗೆ ಗೊತ್ತಾದರೆ ಎಂಬ ಭ್ರಮೆಯಲಿ ಜೀವಕ್ಕೆ ಅಪಾಯ ತಂದುಕೊಳ್ಳಬಾರದು.ಈ ಸೋಂಕು ಇಡೀ ವಿಶ್ವಕ್ಕೆ ಆವರಿಸಿದೆ. ಹೀಗಾಗಿ ಧೈರ್ಯ ದಿಂದ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದು ಜನತೆಗೆ ಆತ್ಮಸ್ಥೈರ್ಯ ತುಂಬಿದರು ಶಾಸಕ ದೇವಾನಂದ ಚವ್ಹಾಣ.
ಈ ಮಾರಣಾಂತಿಕ ಸೋಂಕು ನಿಯಂತ್ರಣಕ್ಕೆ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ. ಮಾಸ್ಕ್ ಧರಿಸುವುದು, ಕೈಗಳಿಗೆ ಅಗಾಗ ಸ್ಯಾನಿಟೈಸರ್ ಬಳಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸೋಂಕಿನಿಂದ ದೂರವಿರಬೇಕು.ಆತಂಕ ಪಡುವುದನ್ನು ಬಿಟ್ಟು ವೈದ್ಯರ ಸಲಹೆಯಂತೆ ಔಷಧೋಪಚಾರ ಪಡೆಯಬೇಕು. ಕಫ್ಯೂ9, ಲಾಕ್ ಡೌನ್ ಸೇರಿದಂತೆ ಅನೇಕ ನಿಯಮಗಳು ಸದ್ಯ ಜಾರಿಯಲ್ಲಿವೆ. ಜನತೆ ಕೆಲ ದಿನಗಳ ಕಾಲ ಮನೆಯಲ್ಲೇ ಇದ್ದು ಸುರಕ್ಷಿತವಾಗಿರಲು ಮನಸ್ಸು ಮಾಡಬೇಕು.ಅನಗತ್ಯ ಓಡಾಟ ನಿಲ್ಲಿಸಬೇಕು. ಬೇಜವಾಬ್ದಾರಿ ತೋರಬಾರದು. ಲಸಿಕೆ ಪಡೆಯಲು ಹಿಂದೇಟು ಹಾಕಬಾರದು.ಜನತೆಯನ್ನು ಪ್ರೇರಿಪಿಸುವ ಕೆಲಸ ಅಗಬೇಕು. ವ್ಯಾಕ್ಸಿನ್ ಬಗ್ಗೆ ತಪ್ಪು ತಿಳುವಳಿಕೆ ಬೇಡ ಎಂದು ಅವರು ಹೇಳಿದರು.
ಈ ಭಾಗದ ವಿವಿಧ ಗ್ರಾಮಗಳ ಮನೆ ಮನೆಗೆ ತೆರಳಿ ಜ್ವರ,ಕೆಮ್ಮು, ಉಸಿರಾಟದ ತೊಂದರೆದಂಥ ರೋಗಗಳನ್ನು ಗುರುತಿಸುವುದರೊಂದಿಗೆ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯ ಎಥ್ಥೇಚ್ಚವಾಗಿ ಸಾಗಬೇಕು. ಅದನ್ನು ಉತ್ತೇಜಿಸಬೇಕು. ಕರೋನಾ ಸೋಂಕಿತರ ಸಮೀಕ್ಷೆ ಕಾಟಾಚಾರಕ್ಕೆ ನಡೆಯದೇ ವ್ಯಾಪಕವಾಗಿ ನೈಜವಾಗಿ ನಡೆಯಬೇಕು. ಈ ಕಾರ್ಯಕ್ಕೆ ಅಣಿಯಾಗಿರುವ ಕರೋನಾ ವಾರಿಯರ್ಸದವರು ಕರ್ತವ್ಯ ನಿರ್ವಹಿಸುವಾಗ ಮೊದಲು ವೈಯಕ್ತಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಮಾಸ್ಕ್, ಸ್ಯಾನಿಟೈಜರ್ ಬಳಸಿ ಕರೋನಾ ನಿಯಮಾವಳಿ ಪಾಲಿಸುವ ಮೂಲಕ ಸಮೀಕ್ಷೆ ನಡೆಸಬೇಕು. ಕೋವಿಡ್ ಸಂಕಷ್ಟದಲ್ಲಿ ಜನರ ಕಷ್ಟಗಳಿಗೆ ಜೀವದ ಹಂಗು ತೋರೆದು ಸ್ಪಂದಿಸುತ್ತಿರುವ ವಾರಿಯರ್ಸ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ದೇವಾನಂದ್ ಚವ್ಹಾಣ ನುಡಿದರು.
ಅಂತಿಮ ವರ್ಷದ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಬಿಎಸ್ಸಿ ನರ್ಸಿಂಗ, ಬಿ.ಡಿ.ಎಸ್,ಎಂ.ಡಿ.ಎಸ್, ಆಯುಷ ಪದವೀಧರ ವೈದ್ಯರ ಸೇವೆಯನ್ನು ಎರವಲು ಪಡೆದು ಗ್ರಾಮೀಣ ಪ್ರದೇಶಗಳಲ್ಲಿನ ಜನತೆಗೆ ಕೋವಿಡ್ ಸೋಂಕಿನ ಅರಿವು ಜಾಗೃತಿ ಮೂಡಿಸಲಾಗುತ್ತಿದೆ. ಪರಿಣಿತ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಬೌತಿಕ ಪರೀಕ್ಷೆ, ಗಂಟಲು ದ್ರವ ಮಾದರಿ ಪರೀಕ್ಷೆ, ಪಲ್ಲ್ ಆಕ್ಸಿಜನ್ ಲೇವಲ್, ಜ್ವರ ತಪಾಸಣೆ ನಡೆಸಿ ಸ್ಥಳದಲ್ಲೇ ಸೂಕ್ತ ಚಿಕಿತ್ಸೆ ನೀಡಿದರು. ವಾರಿಯರ್ಸ್ ಗಳಿಗೆ ಅವಶ್ಯಕ ವೈದ್ಯಕೀಯ ಕಿಟ್ ವಿತರಿಸಲಾಯಿತು.
ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್.ರಾಠೋಡ, ತಾಲೂಕಾ ವೈದ್ಯಾಧಿಕಾರಿ ಡಾ. ಕವಿತಾ ದೊಡಮನಿ, ಗ್ರಾಪಂ.ಅಧ್ಯಕ್ಷೆ ಭಾಗ್ಯಶ್ರೀ ರಾಠೋಡ, ಕಾರ್ಯದರ್ಶಿ ಮಾಲಾಶ್ರೀ ಅಮ್ಮನವರ, ಪಿಡಿಒ ಎಸ್.ಆಯ್.ಗದ್ದಗಿಮಠ, ಸಿಎಚ್ ಒ ಸಂತೋಷ ಹತ್ತಿಕಾಳ, ಕನ್ನಾಳ ಗ್ರಾಪಂ.ಸದಸ್ಯೆ ಅರ್ಚನಾ ಮೋಹನ ಚವ್ಹಾಣ, ಪ್ರಕಾಶ ಚವ್ಹಾಣ, ಕಾಶೀರಾಯಗೌಡ ಪಾಟೀಲ, ಹುಸೇನಿ ಹೊಸಮನಿ, ಸಂತೋಷ ದೊಡಮನಿ, ಅಶೋಕ ಹತ್ತಳ್ಳಿ, ತಾಯವ್ವ ಬಿರಾದಾರ, ಸವಿತಾ ಜಂಬಗಿ ಸೇರಿದಂತೆ ಗ್ರಾಪಂ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಬಿಸ್ಮಿಲ್ಲಾ ಔಟಟೆ ಮತ್ತು ಸಿಬ್ಬಂದಿಗಳು, ಗ್ರಾಮದ ಪ್ರಮುಖರು ಇದ್ದರು.