ಸೋಂಕಿಗೆ ಬಲಿ, ಲಕ್ಷ ರೂ. ಪರಿಹಾರ

ಬೆಂಗಳೂರು, ಜೂ. ೧೪- ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಬಿಪಿಎಲ್ ಕಾರ್ಡ್‌ದಾರರ ಕುಟುಂಬಸ್ಥರಿಗೆ ೧ ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಹಲವರು ಬಲಿಯಾಗಿದ್ದಾರೆ. ಹಲ ಬಡ ಕುಟುಂಬಗಳು ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಈಡಾಗಿವೆ. ಕೆಲ ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ. ಇದನ್ನು ಮನಗಂಡು ಸರ್ಕಾರ ಈ ಬಡ ಕುಟುಂಬಗಳಿಗೆ ೧ ಲಕ್ಷ ರೂ. ಪರಿಹಾರ ನೀಡುವ ತೀರ್ಮಾನ ಮಾಡಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಲ್ಲಿ ಯಾರಾದರೂ ವಯಸ್ಕರು ಮೃತಪಟ್ಟಿದ್ದರೆ ಅಂತಹ ಕುಟುಂಬಗಳಿಗೆ ೧ ಲಕ್ಷ ರೂ. ಪರಿಹಾರ ನೀಡುವುದಾಗಿ ಅವರು ತಿಳಿಸಿದರು. .
ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿಂದು ಹಣಕಾಸು ಇಲಾಖೆಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಬಿಪಿಎಲ್ ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ೧ ಲಕ್ಷ ರೂ. ಪರಿಹಾರ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಕೊರೊನಾದಿಂದ ಮೃತಪಟ್ಟ ಬಡವರ ಕುಟುಂಬಗಳಿಗೆ ೧ ಲಕ್ಷ ರೂ. ಪರಿಹಾರ ನೀಡಲು ಸುಮಾರು ೨೫೦ ರಿಂದ ೩೦೦ ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಬಿಪಿಎಲ್ ಕುಟುಂಬಕ್ಕೆ ಸೇರಿದ ಸುಮಾರು ೨೫ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಅಂದಾಜು ಇದೆ ಎಂದರು. ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳಿಗೆ ಶಾಲಾ ಸೇವಾ ಯೋಜನೆಯನ್ನು ಸರ್ಕಾರ ಈಗಾಗಲೇ ಪ್ರಕಟಿಸಿದ್ದು, ಕೊರೊನಾಗೆ ಬಲಿಯಾದ ಬಡವರಿಗೂ ಸರ್ಕಾರ ಈಗ ೧ ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.
ಲಾಕ್‌ಡೌನ್‌ನಿಂದ ಬಾಧಿತರಾದ ಹಲವು ಶ್ರಮಿಕ ವರ್ಗಗಳಿಗೆ ಸರ್ಕಾರ ೧೭೫೦ ಕೋಟಿ ರೂ.ಗೆ ಹೆಚ್ಚಿನ ಪ್ಯಾಕೇಜ್‌ನ್ನು ನೀಡಿದ್ದು, ಬಿಪಿಎಲ್ ಕುಟುಂಬಗಳಲ್ಲಿ ಮೃತಪಟ್ಟಿರುವವರಿಗೆ ೧ ಲಕ್ಷ ರೂ. ಪರಿಹಾರ ನೀಡುವ ಮೂಲಕ ಸರ್ಕಾರ ಬಡವರ ನೆರವಿಗೆ ನಿಂತಿದೆ ಎಂದು ಅವರು ಹೇಳಿದರು.
ಸಿಐಡಿ ತನಿಖೆ
ಮಂಡ್ಯ ಹಾಲು ಒಕ್ಕೂಟದಲ್ಲಿ ನೀರಿಗೆ ಹಾಲು ಬೆರೆಸಿರುವ ಪ್ರಕರಣದ ತನಿಖೆಯನ್ನು ಸಿಐಡಿಯಿಂದ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರು ಅಧಿಕಾರಿಗಳನ್ನು ಅಮಾನತ್ತು ಮಾಡಿ ವ್ಯವಸ್ಥಾಪಕ ನಿರ್ದೇಶಕರನ್ನು ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಸಹಕಾರ ಇಲಾಖೆಯಿಂದ ತನಿಖೆ ನಡೆದಿತ್ತು. ಈಗ ಈ ಪ್ರಕರಣ ಕುರಿತು ಸಿಐಡಿ ತನಿಖೆಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಕೊರೊನಾಗೆ ಬಲಿಯಾದ ಬಡವರಿಗೆ ೧ ಲಕ್ಷ ರೂ. ಪರಿಹಾರ.

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಸ್ಥರಲ್ಲಿ ಮಾತ್ರ ಒಬ್ಬರಿಗೆ ಮಾತ್ರ ಪರಿಹಾರ ಅನ್ವಯ.

ಸರ್ಕಾರಕ್ಕೆ ೨೫೦ ರಿಂದ ೩೦೦ ಕೋಟಿ ರೂ. ವೆಚ್ಚ.

ಮಂಡ್ಯ ಹಾಲು ಒಕ್ಕೂಟ ಹಗರಣ ಸಿಐಡಿ ತನಿಖೆಗೆ.