ಸೋಂಕಿಗೆ ಪತ್ರಕರ್ತರು ಬಲಿ:ರಾಹುಲ್ ಕಳವಳ

ನವದೆಹಲಿ,ಮೇ ೨- ದೇಶದಾದ್ಯಂತ ಕೊರೊನಾ ಸೋಂಕು ತೀವ್ರತೆ ಪಡೆದುಕೊಳ್ಳುತ್ತಿರುವ ಬೆನ್ನಲ್ಲೆ ಸೋಂಕಿನ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಸಾವು ಕುರಿತಂತೆ ಬೆಳಕು ಚೆಲ್ಲುವ ವರದಿಯನ್ನು ಎಐಸಿಸಿ ಮುಖಂಡ ರಾಹುಲ್‌ಗಾಂಧಿ ಹಂಚಿಕೊಂಡಿದ್ದಾರೆ.
ಪ್ರತಿದಿನ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳ ಹಾಗೂ ಸೋಂಕಿನಿಂದ ಸಂಭವಿಸುವ ಸಾವಿನ ಪ್ರಕರಣಗಳ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿರುವ ರಾಹುಲ್‌ಗಾಂಧಿ, ಕೊರೊನಾ ಅಲೆಯ ನಡುವೆ ಸಾವಿಗೀಡಾಗಿರುವ ಪತ್ರಕರ್ತರ ಕುರಿತ ಅಂಕಿ-ಅಂಶಗಳನ್ನು ಟ್ವೀಟ್ ಮಾಡಿರುವ ರಾಹುಲ್‌ಗಾಂಧಿ ಅವರು ನಿಮ್ಮನ್ನು ೨೪ ಗಂಟೆಗಳ ಕಾಲವು ತೋರಿಸುವವರ ಸ್ಥಿತಿಯನ್ನು ಒಮ್ಮೆ ನೋಡಿ ಎಂದು ಪತ್ರಕರ್ತರ ಸಾವು ಕುರಿತಂತೆ ಮಾಡಿರುವ ವರದಿಯೊಂದಿಗೆ ಟ್ವೀಟ್ ಮಾಡಿದ್ದಾರೆ.
೧೬೫ ಮಂದಿ ಭಾರತೀಯ ಪತ್ರಕರ್ತರು ಇದುವರೆಗೂ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಏಪ್ರಿಲ್‌ನಲ್ಲಿ ಪ್ರತಿದಿನ ಸರಾಸರಿ ಇಬ್ಬರು ಪತ್ರಕರ್ತರು ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರನ್ನು ಮುಂಚೂಣಿ ಕೆಲಸಗಾರರೆಂದು ಪರಿಗಣಿಬೇಕು. ಲಸಿಕೆ ನೀಡುವಲ್ಲಿ ಪತ್ರಕರ್ತರಿಗೆ ಆಧ್ಯತೆ ನೀಡಬೇಕು ಎಂಬ ಬೇಡಿಕೆಯು ವ್ಯಾಪಕವಾಗಿ
ಕೇಳಿ ಬರುತ್ತಿದೆ ಎಂದಿದ್ದಾರೆ.
ಕಳೆದ ತಿಂಗಳು ಉತ್ತರಾಖಂಡ್ ಮುಖ್ಯಮಂತ್ರಿ ತೀರತ್‌ಸಿಂಗ್ ಅವರು ರಾಜ್ಯದ ಎಲ್ಲ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳಿಗೆ ಮುಂಚೂಣಿ ಕೆಲಸಗಾರರು ಎಂದು ಪರಿಗಣಿಸಿ ಲಸಿಕೆ ಹಾಕಿಸುವಂತೆ ಆದೇಶಿಸಿದ್ದರು.
ಕಳೆದ ಏ. ೧೪ ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ಕೇಙ್ರವಾಲ್ ಪತ್ರಕರ್ತರನ್ನು ಮುಂಚೂಣಿ ಕೆಲಸಗಾರರಂತೆ ನೋಡಿಕೊಳ್ಳಬೇಕು ಮತ್ತು ಕೋವಿಡ್ ವಿರುದ್ಧ ಲಸಿಕೆ ಹಾಕಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.