ಸೊಳ್ಳೆಗಳನ್ನು ನಿಯಂತ್ರಿಸಿದರೆ ಮಲೇರಿಯಾ ಕಾಯಿಲೆ ದೂರ


ಗುಳೇದಗುಡ್ಡ,ಮೇ.24: ಸೊಳ್ಳೆಗಳಿಂದ ಮಲೇರಿಯಾ, ಡೆಂಗ್ಯೂ, ಚಿಕೂನಗುನ್ಯಾ, ಮೆದುಳು ಜ್ವರ, ಆನೆಕಾಲು ರೋಗದಂತಹ ಕಾಯಿಲೆಗಳು ಹರಡುತ್ತವೆ. ಸೊಳ್ಳೆಗಳನ್ನು ನಿಂಯತ್ರಿಸಿದರೆ ಈ ಕಾಯಿಲೆಗಳನ್ನು ತಡೆಗಟ್ಟಬಹುದು. ಸಾರ್ವಜನಿಕರು ಎಲ್ಲೆಂದರಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಇದರಿಂದ ಸೊಳ್ಳೆಗಳ ಸಂತತಿ ಕಡಿಮೆಯಾಗುತ್ತದೆ. ಮಲಗುವಾಗ ಸೊಳ್ಳೆ ಪರದೆ ಕಟ್ಟಿಕೊಂಡು ಮಲಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಬಿ. ಪಾಟೀಲ ಹೇಳಿದರು.
ಅವರು ಸಮೀಪದ ಪಾದನಕಟ್ಟಿ ಗ್ರಾಮದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಇಲಾಖೆ ಹಾಗೂ ತೋಗುಣಶಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ಥಳೀಯ ಗ್ರಾಪಂಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೋಗಣಶಿಯ ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮಣ ಸನ್ನಲಿ ಮಾತನಾಡಿ, ಅನಾಫಿಲಿಸ್ ಸೊಳ್ಳೆಗಳು ಕಚ್ಚುವುದರಿಂದ ಮಲೇರಿಯಾ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ, ವಿಪರೀತ ಜ್ವರ, ವಾಂತಿ, ವಿಪರೀತ ತಲೆ ನೋವು ಮಲೇರಿಯಾ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಸಮೀಪದ ಪ್ರಾಥಮಿಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕೀಟಶಾಸ್ತ್ರ ತಜ್ಞ ಎಂ.ಎಲ್. ಹಸರೆಡ್ಡಿ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಎಚ್.ಮಹಾಲಿಂಗಪೂರ,ಅಶೋಕ ಬಡಿಗೇರ, ಕೆ.ಪಿ.ಹಂಪಿಹೊಳೆ, ಎಸ್.ವೈ. ನೀಲನ್ನವರ, ಎಂ.ಎಸ್.ಅಂಗಡಿ,ಜಂಪಣ್ಣ ಕಟಗೇರಿ,ಶಾಲಾ ಮುಖ್ಯಗುರುಗಳಾದ ವೈ.ಎಸ್. ಮಜ್ಜಗಿ, ಎಲ್.ಆರ್. ನಾಗರಾಳ, ನೀಲಪ್ಪ ಕಂಬಾರ, ಶಂಕರ ಹುಲ್ಯಾಳ ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಸಿಬ್ಬಂದಿ ಇದ್ದರು.