ಸೊಲ್ಲಾಪುರ – ಗದಗ – ಸೊಲ್ಲಾಪುರ ಡೆಮು ಎಕ್ಸ್‍ಪ್ರೆಸ್, ಗದಗ-ಸಿಎಸ್‍ಎಂಟಿ (ಮುಂಬಯಿ) ರೈಲು ವಿಸ್ತರಣೆಗೆ ಮನವಿ


ಸಂಜೆವಾಣಿ ವಾರ್ತೆ
ಬಳ್ಳಾರಿ, ಆ. 31: ಸೊಲ್ಲಾಪುರ – ಗದಗ – ಸೊಲ್ಲಾಪುರ ಡೆಮು ಎಕ್ಸ್‍ಪ್ರೆಸ್ ಮತ್ತು ಗದಗ-ಸಿಎಸ್‍ಎಂಟಿ (ಮುಂಬಯಿ) ರೈಲಿನ ಸೇವೆಯನ್ನು ಬಳ್ಳಾರಿ ಜಂಕ್ಷನ್‍ವರೆಗೂ ಮುಂದುವರೆಸಲು ಕೋರಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಸಂಸದರು ಮತ್ತು ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಹೊಸಪೇಟೆಯಲ್ಲಿ ಮಂಗಳವಾರ ಮನವಿ ಸಲ್ಲಿಸಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸಿ. ಶ್ರೀನಿವಾಸರಾವ್, ಗೌರವ ಕಾರ್ಯದರ್ಶಿ ಯಶವಂತರಾಜ್ ನಾಗಿರೆಡ್ಡಿ ಮತ್ತು  ಸ್ಪೆಷಲ್ ಕೋ-ಆರ್ಡಿನೇಟರ್ ಕೃಷ್ಣಪ್ರಸಾದ್ ಅವರು ಮನವಿ ಸಲ್ಲಿಸಿದ್ದು, ಬಳ್ಳಾರಿ ನಗರದ ಅನೇಕ ವಾಣಿಜ್ಯೋದ್ಯಮ ಚಟುವಟಿಕೆಗಳು ಮಹಾರಾಷ್ಟ್ರದ ಜೊತೆ ನಿತ್ಯವೂ ನಡೆಯುತ್ತಿವೆ. ಬಳ್ಳಾರಿಯಲ್ಲಿರುವ ಉದ್ಯಮಿಗಳ ಅನುಕೂಲಕ್ಕಾಗಿ ಮತ್ತು ಹಂಪೆ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ರೈಲುಗಳ ಸಂಚಾರವನ್ನು ಹೊಸಪೇಟೆಯಿಂದ ತುರ್ತಾಗಿ ಬಳ್ಳಾರಿ ಜಂಕ್ಷನ್‍ವರೆಗೂ ವಿಸ್ತರಿಸಬೇಕು ಎಂದು ಅವರು ಮನವಿಯಲ್ಲಿ ಕೋರಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮನವಿಯನ್ನು ಸ್ವೀಕರಿಸಿದ ಸಂಸದರಾದ ವೈ. ದೇವೇಂದ್ರಪ್ಪ, ಕರಡಿ ಸಂಗಣ್ಣ ಮತ್ತು ನೈರುತ್ಯ ರೈಲ್ವೆ ಅಧಿಕಾರಿಗಳು, ಸೊಲ್ಲಾಪುರ – ಗದಗ – ಸೊಲ್ಲಾಪುರ ಡೆಮು ಎಕ್ಸ್‍ಪ್ರೆಸ್ ಮತ್ತು ಗದಗ-ಸಿಎಸ್‍ಎಂಟಿ (ಮುಂಬಯಿ) ರೈಲಿನ ಸೇವೆಯನ್ನು ಬಳ್ಳಾರಿ ಜಂಕ್ಷನ್‍ವರೆಗೂ ಮುಂದುವರೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.