ಸೊಲ್ಲಾಪುರದಲ್ಲಿ ಕನ್ನಡ ಧ್ವಜ ಹಾರಿಸುತ್ತೇವೆ

ಬೀದರ್:ನ.21: ಮಹಾರಾಷ್ಟ್ರ ಮುಖಂಡರು ಪದೇ ಪದೇ ಕರ್ನಾಟಕ ಗಡಿ ತಂಟೆಗೆ ಬಂದರೆ ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿ ಮೇಲೆ ಕನ್ನಡ ಧ್ವಜ ಹಾರಿಸುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡ ಪರ ಸಂಘಟನೆಗಳ ಒಕ್ಕೂಟ)ಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಎಚ್ಚರಿಕೆ ನೀಡಿದ್ದಾರೆ.

ನೆಲ, ಜಲ, ಭಾಷೆ ವಿಚಾರದಲ್ಲಿ ಕನ್ನಡಿಗರ ತಾಳ್ಮೆ ಪರೀಕ್ಷಿಸಬಾರದು. ನಮ್ಮ ಒಂದಿಂಚು ಭೂಮಿ ಕೂಡ ಯಾರಿಗೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ.

ಬೆಳಗಾವಿ, ನಿಪ್ಪಾಣಿ ಹಾಗೂ ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜೀತ್ ಪವಾರ್ ನೀಡಿರುವ ಹೇಳಿಕೆ ಖಂಡನೀಯ ಎಂದಿದ್ದಾರೆ.

ಮಹಾಜನ್ ವರದಿ ಪ್ರಕಾರ ಶೇ 50ಕ್ಕೂ ಅಧಿಕ ಸಂಖ್ಯೆಯಲ್ಲಿ ಕನ್ನಡಿಗರು ಇರುವ ಮಹಾರಾಷ್ಟ್ರದ ಸೊಲ್ಲಾಪುರ, ಜತ್ ಹಾಗೂ ಅಕ್ಕಲಕೋಟ ಕರ್ನಾಟಕಕ್ಕೆ ಸೇರಬೇಕಿತ್ತು. ಆದರೆ, ಕನ್ನಡಿಗರು ಈ ವಿಷಯವನ್ನು ಕೆದಕಿಲ್ಲ ಎಂದು ತಿಳಿಸಿದ್ದಾರೆ.

ಕನ್ನಡಿಗರು ಸಹನಶೀಲರಷ್ಟೇ ಅಲ್ಲ; ವಿಶಾಲ ಮನಸ್ಸುಳ್ಳವರೂ ಆಗಿದ್ದಾರೆ. ಈಚೆಗೆಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಮರಾಠರ ಅಭಿವೃದ್ಧಿಗಾಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವುದು ಇದಕ್ಕೆ ಉತ್ತಮ ನಿದರ್ಶನವಾಗಿದೆ. ಅಜೀತ್ ಪವಾರ್ ಮರಾಠಿಗರು-ಕನ್ನಡಿಗರ ಬಾಂಧವ್ಯಕ್ಕೆ ಧಕ್ಕೆ ಉಂಟು ಮಾಡುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಗಡಿಯಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಅಣ್ಣ- ತಮ್ಮಂದಿರಂತೆ ಇದ್ದಾರೆ. ಗಡಿ ವಿಚಾರ ಈಗ ಯಾರಿಗೂ ಬೇಕಾಗಿಲ್ಲ. ಕರ್ನಾಟಕದಿಂದ ಮಹಾರಾಷ್ಟ್ರದ ನಗರಗಳಿಗೆ ಹೋಗುವ ರಾಜ್ಯದ ಬಸ್‍ಗಳಲ್ಲಿ ಕನ್ನಡ ಜತೆಗೆ ಮರಾಠಿ ಭಾಷೆ ನಾಮಫಲಕವನ್ನೂ ಹಾಕುತ್ತಿರುವುದು ಕರ್ನಾಟಕದ ಪರಭಾಷಾ ಸಹಿಷ್ಣುತೆಗೆ ಹಿಡಿದ ಕೈಗನ್ನಡಿಯಾಗಿದೆ. ಆದರೆ, ಮಹಾರಾಷ್ಟ್ರದಿಂದ ಕರ್ನಾಟಕದೊಳಗೆ ಸಂಚರಿಸುವ ಯಾವ ಬಸ್‍ನಲ್ಲೂ ಕನ್ನಡ ನಾಮಫಲಕ ಹಾಕುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರಗಳು ಗಡಿಗಷ್ಟೇ ಸೀಮಿತವಾಗಿಲ್ಲ. ಎರಡೂ ರಾಜ್ಯಗಳ ನಡುವೆ ಕೌಟುಂಬಿಕ ಸಂಬಂಧಗಳು ಇವೆ. ಮಹಾರಾಷ್ಟ್ರದ ಬಹಳಷ್ಟು ಮಂದಿ ಕರ್ನಾಟಕದಲ್ಲಿ ಹಾಗೂ ಕರ್ನಾಟಕದವರು ಮಹಾರಾಷ್ಟ್ರದಲ್ಲಿ ಇದ್ದಾರೆ. ಹೀಗಾಗಿ ಮಹಾರಾಷ್ಟ್ರದ ಮುಖಂಡರು ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಕಿಚ್ಚು ಹೊತ್ತಿಸುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

ಅಜೀತ್ ಪವಾರ್ ಅವರು ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು. ಮುಗಿದು ಹೋಗಿರುವ ಗಡಿ ವಿಚಾರವನ್ನು ಮತ್ತೆ ಕೆದಕಿದರೆ ಮಹಾರಾಷ್ಟ್ರದ ಸೊಲ್ಲಾಪುರ, ಜತ್ ಹಾಗೂ ಅಕ್ಕಲಕೋಟಗಳನ್ನು ಕರ್ನಾಟಕಕ್ಕೆ ಸೇರಿಸುವಂತೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.