ಸೊರಬ: ೪ನೇ ಬಾರಿಯಲ್ಲೂ ಸಹೋದರರ ಸವಾಲ್

ಸೊರಬ, ಏ. ೧೮: ‘ಅಣ್ಣ ತಮ್ಮನ ಹಣಾಹಣಿಗೆ, ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ವೇದಿಕೆ ಸಿದ್ಧವಾಗಿದೆ. ಸತತ ನಾಲ್ಕನೇ ಬಾರಿ, ಚುನಾವಣಾ ಅಖಾಡದಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ‘ಸಹೋದರರ ಸವಾಲ್ ನಿಂದ ಸೊರಬ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ! ಹೌದು. ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ಪುತ್ರರಾದ ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ, ಪ್ರಸ್ತುತ ವಿಧಾನಸಭೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.
ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇಬ್ಬರ ನಡುವೆ ಆರೋಪ-ಪ್ರತ್ಯಾರೋಪಗಳು ತಾರಕ್ಕೇರಿದೆ. ಶತಾಯಗತಾಯ ಜಯ ಸಾಧಿಸಲೇಬೇಕೆಂಬ ಜಿದ್ದಿಗೆ ಬಿದ್ದಿದ್ದಾರೆ.
ಮುಖಾಮುಖಿ : ೨೦೦೪ ರಲ್ಲಿ ಎಸ್. ಬಂಗಾರಪ್ಪ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ ಅಂದು ಸೊರಬ ಕ್ಷೇತ್ರದ ಶಾಸಕರಾಗಿದ್ದ ಕುಮಾರ್ ಬಂಗಾರಪ್ಪ ತಂದೆ ಜೊತೆ ಹೆಜ್ಜೆ ಹಾಕಿರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದುಕೊಂಡಿದ್ದರು. ೨೦೦೪ ರ ವಿಧಾನಸಭೆ ಚುನಾವಣೆಯಲ್ಲಿ, ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಕುಮಾರ್ ಎದುರು ಬಿಜೆಪಿಯಿಂದ ಮಧುರನ್ನು ಬಂಗಾರಪ್ಪ ಅಖಾಡಕ್ಕಿಳಿಸಿದ್ದರು. ಮೊದಲ ಬಾರಿಗೆ ಸಹೋದರರು ಚುನಾವಣೆಯಲ್ಲಿ ಎದುರಾಳಿಗಳಾಗಿದ್ದರು. ಈ ಚುನಾವಣೆಯಲ್ಲಿ ಕುಮಾರ್ ೪೪,೬೭೭ ಮತ ಪಡೆದು ಜಯಭೇರಿ ಬಾರಿಸಿದ್ದರು. ೩೨,೭೪೮ ಮತ ಪಡೆದ ಮಧು ಪರಾಭವಗೊಂಡಿದ್ದರು.
೨೦೦೮ ರ ಚುನಾವಣೆಯು ಸಹೋದರರಿಬ್ಬರಿಗೂ ಕಹಿಯಾಗಿತ್ತು. ಮೊದಲ ಬಾರಿಗೆ ಸೊರಬ ಕ್ಷೇತ್ರ ಎಸ್.ಬಂಗಾರಪ್ಪ ಕುಟುಂಬದಿಂದ ಕೈ ಜಾರಿತ್ತು. ಸಹೋದರರ ಕಲಹದಲ್ಲಿ ಹರತಾಳು ಹಾಲಪ್ಅ ವರು ೫೩,೫೫೩ ಮತ ಪಡೆದು ವಿಜಯ ನಗೆ ಬೀರಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಕುಮಾರ್ ೩೨,೪೯೯ ಮತ ಹಾಗೂ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮಧು ೩೧,೧೩೫ ಮತ ಪಡೆದು ಸೋಲನುಭವಿಸಿದ್ದರು.
೨೦೧೩ ರಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದ ಮಧು ೫೮,೫೪೧ ಮತ ಪಡೆದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಕುಮಾರ್ ೩೩,೧೭೬, ಕೆಜೆಪಿಯಿಂದ ಕಣಕ್ಕಿಳಿದ ಹರತಾಳು ಹಾಲಪ್ಪ ೩೭,೩೧೬ ಹಾಗೂ ಬಿಜೆಪಿ ಹುರಿಯಾಳು ನಾಗರಾಜಗೌಡರವರು ೫೨೨೬ ಮತ ಪಡೆದಿದ್ದರು. ೨೦೧೮ ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಕಣಕ್ಕಿಳಿದ ಕುಮಾರ್ ೭೨,೦೯೧ ಮತಪಡೆದು ಜಯ ಸಾಧಿಸಿದ್ದರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಮಧು ೫೮,೦೮೧ ಮತ ಪಡೆದು ಪರಾಭವಗೊಂಡಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ರಾಜು ಎಂ. ತಲ್ಲೂರು ೨೧,೭೨೧ ಮತ ಗಳಿಸಿದ್ದರು. ೨೦೨೩ ರ ಚುನಾವಣೆಯಲ್ಲಿ ಮತ್ತೆ ಕುಮಾರ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಆದರೆ ಮಧು ಜೆಡಿಎಸ್ ತೊರೆದು ಕಾಂಗ್ರೆಸ್‌ನಿಂದ ಅಖಾಡಕ್ಕೆ ಧುಮುಕಿದ್ದಾರೆ. ಸದ್ಯದ ಸೊರಬ ಕ್ಷೇತ್ರದ ಚಿತ್ರಣ ಗಮನಿಸಿದರೆ ಇಬ್ಬರ ನಡುವೆ ನೇರ ಹಣಾಹಣಿ ಕಂಡುಬರುತ್ತಿದೆ. ಯಾರಿಗೆ ಜಯ ದೊರಕಲಿದೆ ಎಂಬುವುದು ಕಾಲವೇ ಉತ್ತರಿಸಬೇಕಾಗಿದೆ.
ಸೊರಬ ವಿಧಾನಸಭಾ ಕ್ಷೇತ್ರವು, ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ಅವರ ಸ್ಪರ್ಧೆ ಕಾರಣದಿಂದಲೇ ಪ್ರತಿ ಅಸೆಂಬ್ಲಿ ಚುನಾವಣೆ ವೇಳೆ ರಾಜ್ಯದ ಗಮನ ಸೆಳೆಯುತ್ತಿತು.
ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಏಳು ಚುನಾವಣೆಗಳಲ್ಲಿ ವಿವಿಧ ಪಕ್ಷಗಳಿಂದ ಕಣಕ್ಕಿಳಿದಿದ್ದ ಎಸ್.ಬಂಗಾರಪ್ಪ ಅವರು, ನಿರಂತರವಾಗಿ ಜಯ ಸಂಪಾದಿಸಿ ಸೋಲಿಲ್ಲದ ಸರದಾರ ಎಂದೇ ಬಿರುದು ಸಂಪಾದಿಸಿದ್ದರು. ೧೯೬೭ ರಿಂದ ೧೯೯೪ ರವರೆಗೆ ಎಸ್.ಬಂಗಾರಪ್ಪ ಅವರು ಕ್ಷೇತ್ರ ಪ್ರತಿನಿಧಿಸಿಕೊಂಡು ಬಂದಿದ್ದರು. ಪಕ್ಷಾಂತರ ಹಾಗೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದ ಕಾರಣದಿಂದ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪುತ್ರ ಕುಮಾರ್ ಬಂಗಾರಪ್ಪ ಅವರನ್ನು ೧೯೯೬ ರಲ್ಲಿ ಸೊರಬ ವಿಧಾನಸಭೆಗೆ ನಡೆದ ಉಪಚುನಾವಣೆ ವೇಳೆ ಅಖಾಡಕ್ಕಿಳಿಸಿದ್ದರು.