ಸೊಪ್ಪುಗಳ ರಾಜ ಪಾಲಾಕ್

ಪ್ರತಿನಿತ್ಯ ಅಡುಗೆ ಮನೆಯಲ್ಲಿ ಬಳಸಲಾಗುವ ಪಾಲಾಕ್ ಸೊಪ್ಪು ಅನೇಕ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಸಬಲ್ಲ ಗುಣಗಳನ್ನು ಹೊಂದಿದೆ. ಮನುಷ್ಯನ ದೇಹದಲ್ಲಿ ಉಂಟಾಗುವ ನಾನಾ ರೋಗಗಳನ್ನು ಗುಣಪಡಿಸಬಲ್ಲ ಸಾಮರ್ಥ್ಯವನ್ನು ಇದು ಹೊಂದಿದೆ.
ಪಾಲಾಕ್ ನಲ್ಲಿರುವ ಆರೋಗ್ಯಕರ ಅಂಶಗಳು ಮನುಷ್ಯನ ವೃದ್ಧಾಪ್ಯವನ್ನು ತಡೆಗಟ್ಟುತ್ತದೆ. ನಾರಿನಾಂಶ, ಪ್ರೋಟೀನ್ ಹೇರಳವಾಗಿದ್ದು, ಮನುಷ್ಯನ ದೇಹಕ್ಕೆ ಬಹುಮುಖ್ಯವಾದ ಕಬ್ಬಿಣಾಂಶ ಈ ಸೊಪ್ಪಿನಲ್ಲಿದೆ. ಪಾಲಾಕ್ ಸೊಪ್ಪನ್ನು ವಾರಕ್ಕೆ ೩ ಬಾರಿ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಕೇವಲ ಆರೋಗ್ಯವಷ್ಟೇ ಅಲ್ಲದೆ, ಸೌಂದರ್ಯವನ್ನೂ ಇದು ವೃದ್ಧಿಸುತ್ತದೆ. ಪಾಲಾಕ್ ಸೊಪ್ಪಿನಲ್ಲಿರುವ ಆರೋಗ್ಯಕರ ಅಂಶಗಳು ಸೋರಿಯಾಸಿಸ್, ತುರಿಕೆ ಮತ್ತು ಒಣಚರ್ಮವನ್ನು ತಡೆಯುತ್ತದೆ. ಅಲ್ಲದೆ, ಕೂದಲ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪಾಲಾಕ್ ಸೊಪ್ಪಿನಲ್ಲಿರುವ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶ ಕೆಂಪು ರಕ್ತಕಣಗಳ ಶಕ್ತಿ ವೃದ್ಧಿಸಿ, ಪ್ರತೀ ಕೂದಲಿಗೂ ಆಮ್ಲಜನಕವನ್ನು ತಲುಪಿಸಲು ಸಹಕಾರಿಯಾಗಿದೆ. ಇದರಿಂದ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟಬಹುದು.
ಈ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ಎ ಹೇರಳವಾಗಿದ್ದು, ಇದು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿಯಿಂದ ಹೊಸ ಜೀವಕೋಶಗಳು ಹುಟ್ಟುತ್ತವೆ. ಮುಖದ ಮೇಲಿನ ಕಪ್ಪುಕಲೆಗಳನ್ನೂ ಇದು ಮಾಯವಾಗಿಸುತ್ತದೆ.
ಸೊಪ್ಪಿನಲ್ಲಿ ವಿಟಮಿನ್ ಕೆ ಇದ್ದು, ಇದು ಬಿಸಿಲಿನಿಂದ ಕಪ್ಪಗಾಗಿರುವ ಚರ್ಮವನ್ನು ಸಹಜ ಬಣ್ಣಕ್ಕೆ ತರುವಲ್ಲಿ ನೆರವಾಗುತ್ತದೆ. ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ. ಸೊಪ್ಪಿನಲ್ಲಿರುವ ವಿಟಮಿನ್ ಬಿ ಸೂರ್ಯನ ಕಿರಣಗಳಲ್ಲಿರುವ ಹಾನಿಕಾರಕ ಅನಿನೇರಳೆ ಕಿರಣಗಳ ಪ್ರಭಾವದಿಂದ ರಕ್ಷಣೆ ನೀಡುತ್ತದೆ.
ಅತಿ ನೇರಳೆ ಕಿರಣಗಳು ತ್ವಚೆಯನ್ನು ಸುಟ್ಟಂತೆ ಮಾಡುವ ಕ್ಯಾನ್ಸರ್ ಹಾಗೂ ವೃದ್ಧಾಪ್ಯ ಕುರುಹುಗಳು ಬೇಗನೆ ಬರುವಂತೆ ಮಾಡುತ್ತದೆ. ಆದರೆ, ಪಾಲಕ್ ಸೊಪ್ಪು ಸೇವನೆ ಅವುಗಳನ್ನು ತಡೆಹಿಡಿಯಲು ರಾಮಬಾಣವಾಗಿ ಕೆಲಸ ಮಾಡುತ್ತದೆ. ಸೊಪ್ಪಿನಲ್ಲಿ ನಾರಿನಾಂಶ ದೇಹದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಮಲಬದ್ಧತೆಯನ್ನೂ ದೂರಾಗಿಸುತ್ತದೆ.