ಸೊನ್ನ ಮಠದಲ್ಲಿ ಅಜಯಸಿಂಗ್‍ಗೆ ಸನ್ಮಾನಕೃಷ್ಣಾ ಯೋಜನೆಗೆ ನೆರವು: ಕೇಂದ್ರಕ್ಕೆ ಮೊರೆ

ಕಲಬುರಗಿ,ಸೆ.22-ರಾಜ್ಯದಲ್ಲಿ ತಲೆದೋರಿದ ಬರಗಾಲ ಪರಿಸ್ಥಿತಿ ನಿಭಾಯಿಸಲು ತಕ್ಷಣಕ್ಕೆ ತಾತ್ಕಾಲಿಕವಾಗಿ ಎನ್‍ಡಿಆರ್‍ಎಫ್ ನಿಯಮದಂತೆ ಅಗತ್ಯ ನೆರವು ನೀಡುವಂತೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ನಿಯೋಗ ಮನವಿ ಮಾಡಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಅಜಯ ಧರ್ಮಸಿಂಗ್ ಹೇಳಿದರು.
ತ್ರಿವಿಧ ದಾಸೋಹ ಕೇಂದ್ರವಾಗಿರುವ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ಸಿದ್ಧಲಿಂಗೇಶ್ವರ ದಾಸೋಹ ವಿರಕ್ತಮಠದ ಲಿಂಗೈಕ್ಯ ಪೂಜ್ಯ ಶಿವಾನಂದ ಶಿವಯೋಗಿಗಳ 44ನೇ ಪುಣ್ಮ ಸ್ಮರಣೋತ್ಸವ ಅಂಗವಾಗಿ ಬುಧವಾರ ರಾತ್ರಿ ಶ್ರೀಮಠದಲ್ಲಿ ಜರುಗಿದ ಶಿವಾನುಭವದಲ್ಲಿ ಸನ್ಮಾನ ಹಾಗೂ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ಕೇಂದ್ರ ಸಚಿವರು ಹಾಗೂ ಕೆಲ ಸಂಸದರು ಸೇರಿಕೊಂಡು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗಿದೆ ಎಂದರು.
ಸರ್ಕಾರ ಈಗಾಗಲೇ 161 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರ ನೀಡಲು ಹಾಗೂ ಕುಡಿವ ನೀರು ಇನ್ನಿತರ ತುರ್ತು ಬರ ಪರಿಹಾರ ಕೆಲಸಗಳಿಗೆ ಕೇಂದ್ರ ನೆರವು ನೀಡಿದರೆ, ಅನುವು ಆಗಲಿದೆ. ಅಲ್ಲದೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಅವರಿಗೆ ಯುಕೆಪಿ ಕೆಲಸಗಳಿಗೆ ಸಹಾಯ ಕೋರಲಾಗುವುದು ಎಂದು ಡಾ.ಅಜಯಸಿಂಗ್ ತಿಳಿಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ಕಲ್ಯಾಣ ಕರ್ನಾಟಕದ ಶ್ರೇಷ್ಠಗಳಲ್ಲಿ ಸೊನ್ನ ಮಠವು ಒಂದಾಗಿದೆ. ಇದು ಉತ್ತರ ಕರ್ನಾಟಕದ ಸಿದ್ಧಗಂಗೆಯಂತೆ ಎಂದು ಬಣ್ಣಿಸಿದರು.
ಶ್ರೀಶೈಲಸಾರಂಗಮಠ-ಸುಲಫಲ ಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳ ಸಾನಿಧ್ಯ ವಹಿಸಿದ್ದರು.ಇಜೇರಿ-ಮಸಬಿನಾಳ ವಿರಕ್ತಮಠದ ಪೂಜ್ಯ ಸಿದ್ದರಾಮ ಮಹಾಸ್ವಾಮಿಗಳ ಅಧ್ಯಕ್ಷತೆ ವಹಿಸಿದ್ದರು. ನೆಲೋಗಿಯ ಪೂಜ್ಯ ಸಿದ್ದಲಿಂಗ ಮಹಾಸ್ವಾಮೀಜಿ, ಜೇರಟಗಿಯ ಮಹಾಂತ ಸ್ವಾಮೀಜಿ, ಫಿರೋಜಾಬಾದಿನ ಗುರುಬಸವ ಮಹಾಸ್ವಾಮೀಜಿ ಹಾಗೂ ಯಡ್ರಾಮಿಯ ಸಿದ್ಧಲಿಂಗ ಮಹಾಸ್ವಾಮಿಗಳ ನೇತೃತ್ವ ವಹಿಸಿದ್ದರು. ಸೊನ್ನ ಮಠದ ಪೂಜ್ಯರಾದ ಶ್ರೀಮಠದ ಪೂಜ್ಯ ಡಾ.ಶಿವಾನಂದ ಮಹಾಸ್ವಾಮಿಗಳು ಸಮ್ಮುಖ ವಹಿಸಿಕೊಂಡು ಮಾತನಾಡಿದರು.
ಅಜಯಸಿಂಗ್ ಅವರಿಗೆ ಜಗಮೆಚ್ಚಿದ ಮಗ ಎಂಬ ಪ್ರಶಸ್ತಿ ನೀಡಿ ಮಠದಿಂದ ಬೆಳ್ಳಿ ಕಿರೀಟ ತೊಡಿಸಿ ವಿಶೇಷ ಸನ್ಮಾನ ಮಾಡಿ, ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಹುದ್ದೆಗೆ ಏರಲಿ ಎಂದು ಆರ್ಶೀವದಿಸಿದರು. ಯುವ ಮುಖಂಡ ವಿಜಯಕುಮಾರ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಶ್ರೀಮಠದಿಂದ ಯುವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ರಾಜಶೇಖರ ಸಿರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಬಾಬುರಾವ ಯಡ್ರಾಮಿ, ರೇಣುಕಾ ಚಟ್ಟರಕಿ, ಗುರು ಎಎಸ್‍ಐ ಇತರರನ್ನು ಸನ್ಮಾನಿಸಲಾಯಿತು. ಬಸವರಾಜ ಮಾಸ್ತರ ಶಹಾಪುರ ಸ್ಮರಣಾರ್ಥ ಅವರ ಪುತ್ರ ರೋಮೇಶ ಮುಧೋಳ ಅವರಿಂದ ನಿರ್ಗತಿಕ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.
ಪ್ರವಚನಕಾರರಾದ ಶಿವಲಿಂಗಯ್ಯ ಶಾಸ್ತ್ರೀ, ಅರ್ಚಕರಾದ ಸಿದ್ದಯ್ಯ ಶಾಸ್ತ್ರೀಗಳು, ಕಲಾವಿದರಾದ ಶಿವರುದ್ರಯ್ಯ ಗೌಡಗಾಂವ,ಶಿವಾನಂದ ನರಿಬೋಳ, ಪ್ರಮುಖರಾದ ಬಸವರಾಜ ಬಿರಾದಾರ ಸೊನ್ನ,ವಿಜಯಕುಮಾರ ಬಿರಾದಾರ,ಶಿವಾನಂದ ಮುಧೋಳ, ಶಿವಾನಂದ ಸಾಹು ಮಾಕಾ, ಸಂಗನಬಸಪ್ಪ ಬಿರಾದಾರ, ಶರಣಬಸಪ್ಪ ಮಣ್ಣೂರ, ಬಾಪುಗೌಡ ಪೆÇಲೀಸ್ ಪಾಟೀಲ್,ನಬಿಸಾಬ ಭಾಗವಾನ್, ನಿಂಗಣ್ಣಗೌಡ ಜವಳಗಿ, ಶ್ರೀಕಾಂತ ಸೋನಾರ, ವಿರೇಶ ಮಾಕಾ, ರಾಚಪ್ಪಗೌಡ ಮಾಲಿಪಾಟೀಲ್, ಚನ್ನವೀರಪ್ಪಗೌಡ ಬಂಡೆಪ್ಪಗೌಡರ, ಅಶೋಕ ಕೋಳಕೂರ, ನಿಂಗನಗೌಡ ಮಾಲಿಪಾಟೀಲ್,ಭೀಮಯ್ಯ ಕಲಾಲ್, ಬಾಪುಗೌಡ ಪಾಟೀಲ್, ಶಿವಲಿಂಗಪ್ಪ ಮುಧೋಳ, ಸಕ್ರೆಪ್ಪಗೌಡ, ರೇವಣಸಿದ್ದಪ್ಪ ಅಕ್ಕಿ ಮೊದಲಾದವರಿದ್ದರು. ಸಾಹಿತಿ ಹಾಗೂ ಉಪನ್ಯಾಸಕ ಸದಾನಂದ ಪಾಟೀಲ್ ನಿರೂಪಿಸಿ, ವಂದಿಸಿದರು.
ಜೇವರ್ಗಿ ಕ್ಷೇತ್ರ ಕಲ್ಯಾಣದಲ್ಲಿ ಮಾದರಿ ಮಾಡುವೆ
ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಜೇವರ್ಗಿ ಕ್ಷೇತ್ರವನ್ನು (ಜೇವರ್ಗಿ-ಯಡ್ರಾಮಿ ತಾಲೂಕು) ಮಾದರಿಯಾಗಿ ಮಾಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕರು ಆಗಿರುವ ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿ, ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪ್ಲಾನ್ ಮಾಡಲು ತಿಳಿಸಿರುವೆ. ಅಲ್ಲದೆ ಸಾರ್ವಜನಿಕರು ಸಹ ಅಭಿವೃದ್ಧಿಯ ಸಲಹೆಗಳನ್ನು ನೀಡಿದರೆ, ಅವನ್ನು ಸೇರಿಕೊಂಡು ಕೆಲಸ ಮಾಡುವೆ. ಯಡ್ರಾಮಿಯಲ್ಲಿ ನೂರು ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ಮಿಸಲಾಗುವುದು. ಜೇವರ್ಗಿಯಲ್ಲಿ ನಿರ್ಮಿಸಿರುವ ತಾಯಿ-ಮಕ್ಕಳ ಆಸ್ಪತ್ರೆಯನ್ನು ಎರಡ್ಮೂರು ತಿಂಗಳಲ್ಲಿ ಉದ್ಘಾಟಿಸಲಾಗುವುದು ಎಂದರು. ಈ ಸ್ಥಾನಕ್ಕೆ ಬರಲು ಕ್ಷೇತ್ರದ ಜನರ ಹಾಗೂ ಶ್ರೀಗಳ ಆರ್ಶೀವಾದವೇ ಕಾರಣವಾಗಿದೆ. ಮೂರನೇ ಸಲ ಶಾಸಕನಾಗಿ, ಮಂಡಳಿಯ ಅಧ್ಯಕ್ಷ ನಾಗಿದ್ದು. ಕ್ಷೇತ್ರದ ಜನರ ಜತೆಗೆ ನಮ್ಮದು ಶಾಸಕ ಎಂಬ ಸಂಬಂಧವಿಲ್ಲ. ನಾವೆಲ್ಲರು ಒಂದೇ ಕುಟುಂಬದವರು ಎಂಬ ಸಂಬಂಧ ಭಾವನೆ ಇದೆ. ಕ್ಷೇತ್ರದ ಜನರ ಬೇಡಿಕೆಗಳನ್ನು ಆಧರಿಸಿಕೊಂಡು ಕೆಲಸ ಮಾಡಿ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು. ಮಂಡಳಿಯ ಅನುದಾನದಲ್ಲಿ ಶೇ.25 ರಷ್ಟು ಭಾಗವನ್ನು ಶೈಕ್ಷಣಿಕ ಪ್ರಗತಿಗೆ ಈ ಸಲ ಬಳಕೆ ಮಾಡಿಕೊಳ್ಳಲಾಗುವುದು ಎಂದು ಡಾ.ಅಜಯಸಿಂಗ್ ತಿಳಿಸಿದರು.