ಸೊನಾಲಿಕಾ ದಾಖಲೆ ಟ್ರಾಕ್ಟರ್‌ಗಳ ಮಾರಾಟ

ಬೆಂಗಳೂರು, ಜ 10: ಸೊನಾಲಿಕಾ ಟ್ರಾಕ್ಟರ್ಸ್ ಹೊಸ ವರ್ಷ ೨೦೨೧ ಅನ್ನು ಸರಿಸಾಟಿ ಇರದ ಸಾಧನೆಯೊಂದಿಗೆ ಪ್ರಾರಂಭಿಸಿದೆ. ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟ್ರಾಕ್ಟರ್ ಬ್ರಾಂಡ್ ಮತ್ತು ಭಾರತದ ನಂ.೧ ರಫ್ತು ಬ್ರಾಂಡ್ ಸೊನಾಲಿಕಾ ಮತ್ತೊಮ್ಮೆ ಏಪ್ರಿಲ್-ಡಿಸೆಂಬರ್ ೨೦೨೦ರ ಅವಧಿಯಲ್ಲಿ ೧ ಲಕ್ಷ ಟ್ರಾಕ್ಟರ್ ಮಾರಾಟದ ಮೂಲಕ ಪ್ರಭಾವಿ ಸಾಧನೆ ದಾಖಲಿಸಿದೆ. ಸೊನಾಲಿಕಾ ಈ ವರ್ಷದಲ್ಲಿ ಶೇ.೩೩.೩ರಷ್ಟು ಪ್ರಗತಿ ಸಾಧಿಸಿದ್ದು ಇದು ಉದ್ಯಮದ ಶೇ.೧೨ಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಮತ್ತು ೨೦೨೦ರ ಇಡೀ ಹಣಕಾಸು ವರ್ಷದ ಮಾರಾಟವನ್ನು ೨೦೨೧ರಲ್ಲಿ ಕೇವಲ ೯ ತಿಂಗಳಲ್ಲಿ ಮೀರಿದೆ. ಒಟ್ಟಾರೆ ಕಂಪನಿಯು ಡಿಸೆಂಬರ್ ತಿಂಗಳಲ್ಲಿ ೧೧,೫೪೦ ಟ್ರಾಕ್ಟರ್‌ಗಳ ಮಾರಾಟ ಮಾಡಿದೆ ಮತ್ತು ಇದು ಅತ್ಯಂತ ಹೆಚ್ಚಿನ ಮಾರುಕಟ್ಟೆ ಪಾಲು ಆಗಿದ್ದು ಶೇ.೧೬.೧ರಷ್ಟಿದೆ.
ಸೊನಾಲಿಕಾ ಟ್ರಾಕ್ಟರ್‍ಸ್ ಕಳೆದ ಮೂರು ವರ್ಷಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಟ್ರಾಕ್ಟರ್‌ಗಳ ಮಾರಾಟ ಕಂಡಿದೆ ಮತ್ತು ಅದೇ ಪ್ರಮಾಣದ ಮಾರಾಟವನ್ನು ೯ ತಿಂಗಳಲ್ಲಿ ದಾಖಲಿಸಿರುವುದು ಕಂಪನಿಯ ಅಸಾಧಾರಣ ಕಾರ್ಯಕ್ಷಮತೆಯನ್ನು ತೋರುತ್ತದೆ. ಸಾಂಕ್ರಾಮಿಕ ದಾಳಿಯ ವರ್ಷವಾದರೂ ಸೊನಾಲಿಕಾ ೨೦೨೦ರಲ್ಲಿ ಟೈಗರ್, ಸಿಕಂದರ್ ಡಿಎಲ್‌ಎಕ್ಸ್, ಮಹಾಬಲಿ ಮತ್ತು ಛತ್ರಪತಿ ಒಳಗೊಂಡು ೫ ಹೊಸ ಪ್ರೀಮಿಯಂ ಟ್ರಾಕ್ಟರ್‌ಗಳನ್ನು ಬಿಡುಗಡೆ ಮಾಡಿದ್ದು ಇದಕ್ಕೆ ಕಂಪನಿಯ ಹೊಸ ತಂತ್ರಜ್ಞಾನದ ಅದ್ಭುತ ಟೈಗರ್ ಎಲೆಕ್ಟ್ರಿಕ್ ಕೂಡಾ ಸೇರಿದೆ ಎಂದು ಎಕ್ಸಿಕ್ಯೂಟಿವ್ ಡೈರೆಕ್ಟರ್ ರಾಮನ್ ಮಿಟ್ಟಲ್ ತಿಳಿಸಿದ್ದಾರೆ.