ಸೊಡಿಯಂ ಹೈಪೋಕ್ಲೋರೈಡ್ ಸಿಂಪಡನೆಯಿಂದ ಸೊಂಕು ಹರಡುವಿಕೆ ತಡೆಯಲು ಸಾಧ್ಯ: ನಿರಾಣಿ

ವಿಜಯಪುರ, ಮೇ.30-ಕೊರೊನಾ ಸೊಂಕು ಗ್ರಾಮ ಮಟ್ಟದಲ್ಲಿ ವ್ಯಾಪಕವಾಗಿ ಹರುಡುತ್ತಿದ್ದು, ಸ್ವಚ್ಚತೆ ನಮ್ಮ ಮೊದಲ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಟ್ಟಣಗಳಲ್ಲಿ ನಿಯಮಿತವಾಗಿ ಸೊಡಿಯಂ ಹೈಪೋಕ್ಲೋರೈಡ್ ಸಿಂಪಡನೆ ಮಾಡುವುದರಿಮದ ಸೊಂಕು ಸಮುದಾಯಕ್ಕೆ ಹರಡುವುದನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.
ವಿಜಯಪುರ ನಗರದಲ್ಲಿ ಎಂ.ಆರ್.ಎನ್. (ನಿರಾಣಿ) ಫೌಂಡೇಶನ್ ವತಿಯಿಂದ ಸೊಡಿಯಂ ಹೈಪೋಕ್ಲೋರೈಡ್ ವಿತರಿಸಿ ಮಾತನಾಡಿದ ಅವರು ಸೊಡಿಯಂ ಹೈಪೊಕ್ಲೋರೈಡ್ ಒಂದು ಡಿಸ್‍ಇನ್ಫೆಕ್ಟೆಡ್ ರಸಾಯನಿಕ ದ್ರಾವಣವಾಗಿದೆ. ಕೊರೊನಾ ಹಳ್ಳಿಗಳಲ್ಲಿ ತನ್ನ ಕಬಂದ ಬಾಹುಗಳನ್ನು ಚಾಚಿರುವ ಈ ಸಂದರ್ಭದಲ್ಲಿ ಕೊರೊನಾ ಸಮುದಾಯ ಹರಡುವಿಕೆಯನ್ನು ತಪ್ಪಿಸಲು ಸ್ವಚ್ಚತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳು, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು, ಸಂತೆ ಕಟ್ಟೆಗಳು ಇಲ್ಲ ಕಡೆಯು ಸ್ಯಾನಿಟೈಸ್ ಮಾಡುವುದು ಅಗತ್ಯವಾಗಿದೆ ಎಂದರು.
ಈ ಕಾರಣಕ್ಕಾಗಿ ಫೌಂಡೇಶನ್ ವತಿಯಿಂದ ಸೊಡಿಯಂ ಹೈಪೋ ಕ್ಲೋರೈಡ್ ದ್ರಾವಣವನ್ನು ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆ ಈಗಾಗಲೇ ಬಾಗಲಕೋಟ, ಬೆಳಗಾವಿ ಹಾಗೂ ಕಲಬುರ್ಗಿ ಜಿಲ್ಲೆಗಳಿಗೆ ಸೊಡಿಯಂ ಹೈಪೋಕ್ಲೋರೈಡ್ ದ್ರಾವಣ ನೀಡಲಾಗಿದೆ ಇಲ್ಲಿಯೂ ಜಿಲ್ಲೆಯಾದ್ಯಂತ ದ್ರಾವಣ ಸಿಂಪಡಿಸುವ ಅಭಿಯಾನಕ್ಕೆ ಎಲ್ಲ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಕೈಜೋಡಿಸಿದೆ ಎಂದು ಹಣಮಂತ ನಿರಾಣಿ ಹೇಳಿದರು.
ದೇವರಹಿಪ್ಪರಗಿ ಶಾಸಕರಾದ ಸೋಮನಗೌಡ ಪಾಟೀಲ್ (ಸಾಸನೂರ) ಮಾತನಾಡಿ ಕೊವಿಡ್ ತುರ್ತು ಪರಿಸ್ಥಿತಿಯಲ್ಲಿ ನಿರಾಣಿ ಫೌಂಡೇಶನ್ ಕಾರ್ಯ ಶ್ಲಾಘನೀಯವಾಗಿದೆ. ಸೊಂಕು ನಿಯಂತ್ರಣಕ್ಕೆ ಇದು ಪರಿಣಾಮಕಾರಿಯಾಗಿದೆ. ದೇವರ ಹಿಪ್ಪರಗಿ ತಾಲೂಕಿಗೆ ಈ ಸೌಕರ್ಯ ನೀಡಿದ್ದಕ್ಕೆ ನಿರಾಣಿ ಪರಿವಾರಕ್ಕೆ ಅಭಿನಂದನೆಗಳು ಇದರ ಉಪಯೋಗವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಅರುಣ ಶಾಹಪೂರ, ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿಗರಡ್ಡಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಭುಗೌಡ ಬಿರಾದರ, ಜಿಲ್ಲಾ ಪಂಚಾಯತ ಸದಸ್ಯ ಸಿದ್ದು ಬುಳ್ಳ ಹಾಗೂ ಬಿಜೆಪಿ ಕಾರ್ಯಕರ್ತರು, ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.