ಸೊಂಪೋ ಜನರಲ್ ಯುನಿವರ್ಸಲ್ ವಿಮೆ ಕಂಪೆನಿಯಿಂದ ರೈತರಿಗೆ ಮೋಸ: ಭಾವಿ

ಕಲಬುರಗಿ,ಜ.7:ಬೆಳೆ ನಷ್ಟಕ್ಕೆ ಸೂಕ್ತ ವಿಮೆ ಹಣ ಬಿಡುಗಡೆ ಮಾಡದೇ ಸೊಂಪೋ ಜನರಲ್ ಯುನಿವರ್ಸಲ್ ಕಂಪೆನಿ ರೈತರಿಗೆ ಮೋಸ ಮಾಡುತ್ತಿದೆ ಎಂದು ಗೋಟೂರ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕೃಷಿಕ ಸಮಾಜದ ಸದಸ್ಯ ಪರಮೇಶ್ವರ್ (ಪ್ರಭು) ಭಾವಿ ಅವರು ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿಯಿಂದ ಹೆಸರು, ಉದ್ದು, ಸೂರ್ಯಕಾಂತಿ, ಸೋಹಬಿನ್ ಮತ್ತು ತೊಗರಿ ಬಎಳೆಗಳು ಹಾಳಾಗಿದೆ. ಅಳಿದುಳಿದ ತೊಗರಿ ಬೆಳೆ ಮಂಜು ಮತ್ತು ನೆಟೆ ರೋಗದಿಂದ ಸಂಪೂರ್ಣ ಹಾಳಾಗಿದೆ. ಇದರ ಕುರಿತು ರೈತ ಪರ ಸಂಘಟನೆಗಳು ಸರ್ಕಾರದ ಗಮನಕ್ಕೆ ತಂದರೂ ಸಮರ್ಪಕವಾಗಿ ರೈತರಿಗೆ ಬೆಳೆ ಪರಿಹಾರ ಸಿಕ್ಕಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಪ್ರಧಾನಮಂತ್ರಿಯವರ ಪಸಲ್ ಭೀಮಾ ಯೋಜನೆ ಅಡಿಯಲ್ಲಿ ವಿಮೆ ನೊಂದಣಿ ಮಾಡಿದ ರೈತರಿಗೆ ಸೂಕ್ತ ವಿಮೆ ಮೊತ್ತ ಸಿಕ್ಕಿಲ್ಲ. ಇದರ ಲೋಪದೋಷದ ಕುರಿತು ಪರಿಶೀಲಿಸಿ ಸೊಂಪೋ ಜನರಲ್ ಯುನಿವರ್ಸಲ್ ವಿಮೆ ಕಂಪೆನಿಯಿಂದ ರೈತರಿಗೆ ವಿಮಾ ಮೊತ್ತ ಬಿಡುಗಡೆಗೊಳಿಸಲು ಅವರು ಕೋರಿದರು.
ಈಗಾಗಲೇ ವಿಮಾ ಕಂಪೆನಿಯು ಬೇಕಾಬಿಟ್ಟಿಯಾಗಿ ಮನಸ್ಸಿಗೆ ಬಂದಂತೆ ಸರ್ವೆ ಮಾಡಿ ಮೂರ್ನಾಲ್ಕು ಸಾವಿರ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಆದಾಗ್ಯೂ, ಭೂಮಿ ಹೆಚ್ಚು ಇದ್ದು, ವಿಮೆ ಜಾಸ್ತಿ ಮಾಡಿದರೂ ಸಹ ಒಂದು ಎಕರೆಗೆ ಮಾತ್ರ ವಿಮೆ ಪರಿಹಾರ ಕೊಟ್ಟಿದ್ದಾರೆ. 14 ಎಕರೆ ಇದ್ದರೂ ಕೂಡ ಒಂದು ಎಕರೆ ಜಮೀನಿಗೆ ಅದೇ ಹದಿನಾಲ್ಕು ಎಕರೆ ಕೊಟ್ಟಿದ್ದಾರೆ. ಈ ಕುರಿತು ವಿಮೆ ಕಂಪೆನಿಗೆ ಕೇಳಿದರೆ ಸೂಕ್ತ ಉತ್ತರವನ್ನು ಕೊಡುತ್ತಿಲ್ಲ ಎಂದು ಅವರು ದೂರಿದರು.
ವಿಮಾ ಕಂಪೆನಿಯ ಕುರಿತು ತಾಲ್ಲೂಕು ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ. ಆದ್ದರಿಂದ ಮುಗ್ದ ರೈತರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ ಅವರು, ಕಾಳಗಿ ತಾಲ್ಲೂಕಿನ ಗೋಟೂರಿನಲ್ಲಿ ನನ್ನ ಹೆಸರಿನಲ್ಲಿ 14 ಎಕರೆ 38 ಗುಂಟೆ ಜಮೀನು ಇದೆ. ಒಟ್ಟು 241984ರೂ.ಗಳ ವಿಮಾ ಮೊತ್ತಕ್ಕೆ 4839.68 ರೂ.ಗಳ ಪ್ರೀಮಿಯಂ ಕಟ್ಟಿರುವೆ. ಆದಾಗ್ಯೂ, ನನಗೆ ಕೇವಲ 3918ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ. ನಾನು ಕಟ್ಟಿದ ಪ್ರೀಮಿಯಂ ಹಣಕ್ಕಿಂತಲೂ ಕಡಿಮೆ ಪರಿಹಾರ ಬಂದಿದೆ. ಇದು ಅನ್ಯಾಯವಾಗಿದ್ದು, ಕೂಡಲೇ ಪರಿಹರಿಸಬೇಕು. ಇಲ್ಲದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಶಿವರಾಜ್ ಹೂಗಾರ್, ಭೀಮಾಶಂಕರ್ ಕಟ್ಟಿ, ಅಶೋಕಕುಮಾರ್ ದರ್ಗಿ ಮುಂತಾದವರು ಉಪಸ್ಥಿತರಿದ್ದರು.