ಸೊಂಕಿತರ ನೆರವಿಗಾಗಿ ಉಚಿತ ಅಂಬ್ಯೂಲೆನ್ಸ್

ಹೊನ್ನಾಳಿ.ಮೇ.೨೭;  ಅವಳಿ ತಾಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಮ್ಮ ತಂದೆ ದಿವಗಂತ ಪಂಚಾಕ್ಷರಯ್ಯ,ತಾಯಿ ದಿವಂಗತ ಕಮಲಮ್ಮನವರ ಸ್ಮರಣಾರ್ಥ ನಾಲ್ಕು ಅಂಬ್ಯೂಲೆನ್ಸ್, 50 ಮಂಚ ಹಾಗೂ 50 ಹಾಸಿಗಳನ್ನು ಸೋಂಕಿತರ ಅನುಕೂಲಕ್ಕಾಗಿ ಉಚಿತವಾಗಿ ನೀಡಿದ್ದು ಸಂಸದ ಸಿದ್ದೇಶ್ವರ್ ಲೋಕಾರ್ಪಣೆ ಮಾಡಿದರು.
ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಅಂಬ್ಯೂಲೆನ್ಸ್ಗಳಿಗೆ ಹಸಿರು ನಿಶಾನೆ ತೋರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ್, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ಪ್ರಾಣದ ಹಂಗನ್ನು ತೊರೆದು ಹಗಲಿರುಳು ಕೋವಿಡ್ ಸೋಂಕಿತರ ಸೇವೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಹಲವು ಬಾರೀ ಆಕ್ಸಿಜನ್ ಕೊರತೆಯಾದಾಗ ಖುದ್ದು ಅವರೇ ಹೋಗಿ ಆಕ್ಸಿಜನ್ ಸಿಲಿಂಡರ್ ತಂದು ಸೋಂಕಿತರ ಪ್ರಾಣ ರಕ್ಷಣೆ ಮಾಡಿದ್ದಾರೆ ಅಲ್ಲದೇ ಪ್ರತಿನಿತ್ಯ ಕೋವಿಡ್ ವಾರ್ಡಿಗೆ, ಕೋವಿಡ್ ಕೇರ್ ಸೆಂಟರ್‌ಗಳಿಗೆ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸುವ ಕೆಲಸ ಮಾಡುತ್ತಿದ್ದು ಯಾವ ಶಾಸಕರು ಮಾಡದ ಕೆಲಸವನ್ನು ರೇಣುಕಾಚಾರ್ಯ ಮಾಡುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಸ್ವಇಚ್ಚೆಯಿಂದ 63 ಆಮ್ಲಜನಕ ಸಾಂದ್ರಕಗಳನ್ನ ಸರ್ಕಾರಿ ಆಸ್ಪತ್ರೆಗೆ ತರಿಸುವ ಮೂಲಕ ಆಮ್ಲಜನಕದ ಸಮಸ್ಯೆ ಆಸ್ಪತ್ರೆಯಲ್ಲಿ ತಲೆತೋರದಂತೆ ಮಾಡಿದ್ದಾರೆ ಎಂದರು. ಇನ್ನು ಆಸ್ಪತ್ರೆ ಆವರಣದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ಮಂಜೂರು ಮಾಡಿಸಿದ್ದು ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಆಕ್ಸಿಜನ್‌ಗೆ ಕೊರತೆಯಾಗದ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಅವಳಿ ತಾಲೂಕಿನ ಮತದಾರರ ಋಣವನ್ನು ರೇಣುಕಾಚಾರ್ಯ ಪ್ರಾಮಾಣಿಕವಾಗಿ ತೀರಿಸುವ ಕೆಲಸ ಮಾಡುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತ ಪಡಿಸಿದರು.ಇದೇ ವೇಳೆ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ ಪ್ರಾಣಿಗಳಲ್ಲಿ ನಿಯತ್ತಿನ ಪ್ರಾಣಿ ಎಂದರೇ ಅದು ಶ್ವಾನ, ನಾನು ಶ್ವಾನದ ರೀತಿಯಲ್ಲಿ ಅವಳಿ ತಾಲೂಕಿನ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು. ಅವಳಿ ತಾಲೂಕಿನ ಜನರ ಋಣ ನನ್ನ ಮೇಲಿದ್ದು ಮೂರು ಬಾರೀ ನನ್ನನ್ನು ಶಾಸಕನ್ನಾಗಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರ ಋಣವನ್ನು ಸ್ವಲ್ಪವಾದರೂ ತೀರಿಸಲು, ನನ್ನ ತಂದೆತಾಯಿಯ ಸ್ಮರಣಾರ್ಥವಾಗಿ ನಾಲ್ಕು ಅಂಬ್ಯೂಲೆನ್ಸ್ಗಳನ್ನು ಕೊರೊನಾ ಸೋಂಕಿತರಿಗಾಗೀ ಉಚಿತವಾಗಿ ನೀಡಿದ್ದೇನೆ ಅಷ್ಟೇ ಅಲ್ಲದೇ ಕೋವಿಡ್ ಕೇರ್ ಸೆಂಟರ್ ಉತ್ತಮ ಗುಣಮಟ್ಟದ 50 ಮಂಚ ಹಾಗೂ 50 ಹಾಸಿಗೆಗಳನ್ನು ನೀಡಿದ್ದೇನೆ ಎಂದ ಶಾಸಕರು ನನ್ನ ಕೈಯಲ್ಲಿ ಏನು ಸಾಧ್ಯವೋ ಅದನ್ನು ಅವಳಿ ತಾಲೂಕಿನ ಜನರಿಗೆ ಶಕ್ತಿ ಮೀರಿ ನೀಡುವುದಾಗಿ ತಿಳಿಸಿದರು. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮಹಂತೇಶ್ ಬೀಳಗಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರತಿಹಳ್ಳಿಗಳಿಗೆ ಭೇಟಿ ನೀಡಿ ಕೊರೊನಾ ಸೋಂಕಿತರ ಮನವೊಲಿಸಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ಸೇರಿಸುವ ಕೆಲಸ ಮಾಡುತ್ತಿದ್ದು ಅವಳಿ ತಾಲೂಕಿನ 416 ಸೋಂಕಿತರು ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುವಂತೆ ಮಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಆರೋಗ್ಯಾಧಿಕಾರಿ ಡಾ.ನಾಗರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ಕೆಂಚಪ್ಪ, ತಹಶೀಲ್ದಾರ್ ಬಸನಗೌಡ ಕೋಟೋರ, ಇಓ ಗಂಗಾಧರ್ ಮೂರ್ತಿ,ಪಿಎಸೈ ಬಸವನಗೌಡ ಬಿರಾದರ್,ಜಿಲ್ಲಾಪಂಚಾಯಿತಿ ಸದಸ್ಯ ಸುರೇಂದ್ರನಾಯ್ಕ,ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್,ಪುರಸಭೆ ಮುಖ್ಯಾಧಿಕಾರಿ ಅಶೋಕ್, ಸದಸ್ಯ ರಂಗನಾಥ್,ನೆಲವೊನ್ನೆ ಮಂಜಣ್ಣ ಸೇರಿದಂತೆ ಮತ್ತಿತರಿದ್ದರು.