ಸೈರನ್ ಸದ್ದು ಮಾಡಲು ಸಜ್ಜು

* ಚಿ.ಗೋ ರಮೇಶ್

ಕನ್ನಡಪರ ಹೋರಾಟಗಾರ ಪ್ರವೀಣ್ ಕುಮಾರ್ ಶೆಟ್ಟಿ ಅವರ ಪುತ್ರ  ಪ್ರವೀರ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ” ಸೈರನ್” ಚಿತ್ರ ಸದ್ದು ಮಾಡಲು ಸಜ್ಜಾಗಿದೆ.

ಚಿತ್ರ ಮುಂದಿನವಾರ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿರುವ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಇತ್ತು. ಹಿರಿಯ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಅಶ್ವಿನಿ ಪುನೀತ್ ರಾಜ್ ಕುಮಾರ್, ನಟ ಡಾಲಿ ಧನಂಜಯ ಸೇರಿದಂತೆ ಹಲವರು ಆಗಮಿಸಿ ಚಿತ್ರಕ್ಕೆ ಶುಭಹಾರೈಸಿದರು.

ಬಿಜು ಶಿವಾನಂದ್ ನಿರ್ಮಾಣ ಮಾಡಿದ್ದು ರಾಜಾ ವೆಂಕಯ್ಯ  ಆಕ್ಷನ್ ಕಟ್ ಹೇಳಿದ್ದಾರೆ. ಈ ವೇಳೆ ಮಾತಿಗಿಳಿದ ರಾಕ್ ಲೈನ್ ವೆಂಕಟೇಶ್, ಕನ್ನಡದ ವಿಷಯ ಬಂದಾಗ ಹೋರಾಟ ನೆನಪಾಗುತ್ತದೆ. ಹಲವಾರು ವರ್ಷಗಳಿಂದ ಪ್ರವೀಣ್ ಶೆಟ್ಟಿ ಅವರನ್ನು  ನೋಡಿದ್ದೇನೆ.. ಅವರ ಮನೆಯಿಂದ ಚಿತ್ರರಂಗಕ್ಕೆ  ಉಡುಗೊರೆಯಾಗಿ ಮಗನನ್ನು ಕೊಡುತ್ತಿದ್ದಾರೆ. ಟ್ರೇಲರ್ ನೋಡಿದಾಗ ಹೊಸ ಹುಡುಗ ಅನಿಸಲಿಲ್ಲ. ಅಷ್ಟು ಚೆನ್ನಾಗಿ  ನಟಿಸಿದ್ದಾರೆ ಪ್ರವೀರ್. ಹೊಸದಾಗಿ ಬರುವವರು ಗುರಿ ಇಟ್ಟುಕೊಂಡು ಬರಬೇಕು ಜೊತೆಗೆ ತಾಳ್ಮೆ ಇರಬೇಕು ಎಂದು ಕಿವಿಮಾತು ಹೇಳಿದರು.

ನಾಯಕ ಪ್ರವೀರ್ ಶೆಟ್ಟಿ ಮಾತನಾಡಿ ‘ ಈ ದಿನಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದೆ.  ಶ್ರೀಮುರಳಿ ಟ್ರೇಲರ್‌ಗೆ ಧ್ವನಿ ಕೊಟ್ಟಿದ್ದು ಮತ್ತಷ್ಟು ಶಕ್ತಿ ಬಂದಿದೆ. ನಿರ್ದೇಶಕರು ಶ್ರಮವಹಿಸಿ ಸಿನಿಮಾ ಮಾಡಿದ್ದಾರೆ. ನಿಮ್ಮೆಲ್ಲರ ಸಹಕಾರ ಇರಲಿ’ ಎಂದರು.

ನಿರ್ದೇಶಕ ರಾಜಾ ವೆಂಕಯ್ಯ, ‘ಮೂಲತಃ ನ ಚೆನ್ನೈನವನು.  “ಸೈರನ್” ಚಿತ್ರದ ಮೂಲಕ ಪ್ರವೀರ್ ಶೆಟ್ಟಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು ಒಳ್ಳೆಯ  ನಟನಾಗುವ ನಿರೀಕ್ಷೆ ಇದೆ’ ಎಂದರು. ತಮಿಳು ನಟ ದೀನಾ, ಚಿತ್ರದ ನಾಯಕಿ ಲಾಸ್ಯ, ನಟಿ ಸ್ಪರ್ಶ ರೇಖಾ, ಸಂಗೀತ ನಿರ್ದೇಶಕ ಭಾರದ್ವಾಜ್, ಛಾಯಾಗ್ರಾಹಕ ನಾಗೇಶ್ ಆಚಾರ್ಯ ಮುಂತಾದವರು ಚಿತ್ರದ ಕುರಿತು ತಮ್ಮ ಅನುಭವ ಹಂಚಿಕೊಂಡರು. ಕೆಆರ್ ಜಿ ಸ್ಟುಡಿಯೋ ಮೂಲಕ ಮುಂದಿನವಾರ ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ಕನ್ನಡಕ್ಕೆ ಹೊಸ ಕಲಾವಿದ

ಸೈರನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಕಲಾವಿದನ ಆಗಮನವಾಗುತ್ತಿದೆ. ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಪ್ರವೀಣ್ ಕುಮಾರ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.ಮುಂದಿನವಾರ ಚಿತ್ರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ