ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿ, ಕರ್ನಾಟಕ ಫೈನಲ್ ಗೆ ಲಗ್ಗೆ

ನವದೆಹಲಿ, ನ.20- ಕರ್ನಾಟಕ ಸೈಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಹಾಕಿದೆ.
ಇಂದು ವಿದರ್ಭ ವಿರುದ್ದ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ನಾಲ್ಕು ರನ್ ಗಳ ರೋಚಕ ಜಯ ದಾಖಲಿಸಿ ಸತತ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದೆ.
ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ, 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳ ಸವಾಲಿನ ಮೊತ್ತ ದಾಖಲಿಸಿತು.
ಆರಂಭಿಕ ಆಟಗಾರ ರೋಹನ್ ಕಡಂ 56 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಬಾರಿಸಿ 87 ರನ್ ಬಾರಿಸಿದರು. ನಾಯಕ ಮನೀಶ್ ಪಾಂಡೆ 54 ಹಾಗೂ ಅಭಿನವ್ ಮನೋಹರ್ 27 ರನ್ ಗಳಿಸಿ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು.
ವಿದರ್ಭ ಪರ ದರ್ಶನ್ ನಾಲ್ಕಂಡೆ ಹ್ಯಾಟ್ರಿಕ್ ಸಹಿತ ನಾಲ್ಕು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
177 ರನ್ ಗಳ ಸವಾಲಿನ ಬೆನ್ನಹತ್ತಿದ ವಿದರ್ಭ, ಉತ್ತಮ ಬ್ಯಾಟಿಂಗ್ ಹೊರತಾಗಿಯೂ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಸೋಲಿಗೆ ಶರಣಾಯಿತು.
ಅಥರ್ವ ತೈದೆ 32, ಗಣೇಶ್ ಸತೀಶ್ 31, ಅಕ್ಷಯ್ ವಾಡ್ಕರ್​ 15, ಶುಭಮ್ ದುಬೆ 24, ಅಪೂರ್ವ ವಾಂಖೆಡೆ 27 ಮತ್ತು ಅಕ್ಷಯ್ ಕರ್ನೇವರ್​ 22 ರನ್​ಗಳಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರಾದೂ ಜಯಗಳಿಸಲು ಸಾಧ್ಯವಾಗಲಿಲ್ಲ.
ಕರ್ನಾಟಕ ಪರ ಕೆಸಿ ಕಾರಿಯಪ್ಪ 27 ರನ್​ ನೀಡಿ 2 ವಿಕೆಟ್ ಪಡೆದರೆ, ದರ್ಶನ್​ ಎಂಬಿ 39ಕ್ಕೆ1, ವಿದ್ಯಾದರ್ ಪಾಟೀಲ್ 29ಕ್ಕೆ1, ಸುಚೀತ್ 34ಕ್ಕೆ1 ಮತ್ತು ಕರುಣ್ ನಾಯರ್ 10ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
ಸೋಮವಾರ ನಡೆಯಲಿರುವ ಫೈನಲ್​ನಲ್ಲಿ ಹಾಲಿ ಚಾಂಪಿಯನ್​ ತಮಿಳುನಾಡಿನ ವಿರುದ್ಧ ಕರ್ನಾಟಕ ಪ್ರಶಸ್ತಿಗಾಗಿ ಸೆಣಸಲಿದೆ.