ಸೈಯದ್ ಸೈಫುಲ್ಲಾ  ನಿವಾಸದಲ್ಲಿ ಸೌಹಾರ್ದತೆ ಇಫ್ತಿಯಾರ್ ಕೂಟ: ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್ ಭಾಗಿ 

ಸಂಜೆವಾಣಿ ವಾರ್ತೆ

ದಾವಣಗೆರೆ.ಏ.11: ಹಳೇ ದಾವಣಗೆರೆಯ ಬಾಷಾ ನಗರದಲ್ಲಿನ ಕಾಂಗ್ರೆಸ್ ಹಿರಿಯ ಮುಖಂಡ ಜನಾಬ್ ಸೈಯದ್ ಸೈಫುಲ್ಲಾ ಸಾಬ್ ನಿವಾಸದಲ್ಲಿ ಸೌಹಾರ್ದತೆಯ ಇಫ್ತಿಯಾರ್ ಕೂಟ ಏರ್ಪಡಿಸಲಾಗಿತ್ತು. ಸೈಯದ್ ಸೈಫುಲ್ಲಾ ಸಾಬ್ ಮನೆಯಲ್ಲಿ ನಡೆದ ಇಫ್ತಿಯಾರ್ ಕೂಟದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಪಾಲ್ಗೊಂಡರು. ಆತಿಥ್ಯವನ್ನು ಸ್ವೀಕರಿಸಿದರು. ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಖಾಲೀದ್ ಅಹ್ಮದ್, ಸೈಯದ್ ಸೈಫುಲ್ಲಾ ಅವರು ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಪ್ರತಿವರ್ಷವೂ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸೈಯದ್ ಸೈಫುಲ್ಲಾ ಸಾಬ್ ನಿವಾಸದಲ್ಲಿ ಸೌಹಾರ್ದತೆಯ ಇಫ್ತಿಯಾರ್ ಕೂಟ ಆಯೋಜಿಸಲಾಗುತ್ತದೆ. ಈ ಇಫ್ತಿಯಾರ್ ಕೂಟದಲ್ಲಿ ಮುಸ್ಲಿಂ ಬಾಂಧವರು ಮಾತ್ರವಲ್ಲ, ಎಲ್ಲಾ ಧರ್ಮದವರು ಪಾಲ್ಗೊಳ್ಳುವುದು ವಿಶೇಷ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸೈಯದ್ ಸೈಫುಲ್ಲಾ ಸಾಬ್ ಹಾಗೂ ಸೈಯದ್ ಖಾಲೀದ್ ಅಹ್ಮದ್ ಸೇರಿದಂತೆ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಹೇಳಿದರು. ಸೌಹಾರ್ದತೆಯ ಇಫ್ತಿಯಾರ್ ಕೂಟ ಆಯೋಜನೆಗೆ ಸಂತಸ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಯುಗಾದಿ ಹಾಗೂ ರಂಜಾನ್ ಹಬ್ಬವು ಒಟ್ಟೊಟ್ಟಾಗಿ ಬಂದಿದೆ. ಎಲ್ಲರೂ ಖುಷಿಯಿಂದಲೇ ಹಬ್ಬ ಆಚರಿಸೋಣ. ರಂಜಾನ್ ಹಾಗೂ ಯುಗಾದಿ ಹಬ್ಬದಂದು ಎಲ್ಲಾ ಧರ್ಮದವರು ಶಾಂತಿಯುತವಾಗಿ ಹಬ್ಬವನ್ನ ಖುಷಿ ಖುಷಿಯಾಗಿ ಸಂಭ್ರಮಿಸೋಣ ಎಂದು ಕರೆ ನೀಡಿದರು. ಸೈಯದ್ ಸೈಫುಲ್ಲಾ ಸಾಬ್ ಮಾತನಾಡಿ, ನಾವು ಇಫ್ತಿಯಾರ್ ಕೂಟವನ್ನು ಪ್ರತಿವರ್ಷವೂ ಆಯೋಜನೆ ಮಾಡುತ್ತೇವೆ. ಎಸ್. ಎಸ್. ಮಲ್ಲಿಕಾರ್ಜುನ್ ಅವರು ಆಗಮಿಸಿದ್ದು ಖುಷಿ ತಂದಿದೆ. ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿರುವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ. ದಾವಣಗೆರೆ ಮತ್ತಷ್ಟು ಅಭಿವೃದ್ಧಿಯಾಗುವಂತೆ ಮಾಡಲಿ. ಮಳೆ, ಬೆಳೆ ಚೆನ್ನಾಗಿ ಆಗಲಿ. ದೇವರು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಹಾರೈಸಿದರು. ರಂಜಾನ್ ಹಾಗೂ ಯುಗಾದಿ ಹಬ್ಬವನ್ನು ಸೌಹಾರ್ದತಯುತ ಹಾಗೂ ಯಾವುದೇ ಗಲಾಟೆಗಳಿಲ್ಲದೇ ಆಚರಣೆ ಮಾಡೋಣ. ಅಣ್ಣ ತಮ್ಮಂದಿರಂತೆ ಎಲ್ಲಾ ಧರ್ಮದವರು ಒಟ್ಟಾಗಿ ಬಾಳೋಣ ಎಂದು ಕರೆ ನೀಡಿದರು.