ಸೈಬರ್ ಹಬ್ ಆಗಿ ಬೆಳೆಯಲು ವಿಟಿಯು ಪ್ರಮುಖ ಪಾತ್ರ

ಸಂಜೆವಾಣಿ ನ್ಯೂಸ್
ಮೈಸೂರು: ಜ.12:- ಇಂದಿನ ಆಧುನಿಕ ತಾಂತ್ರಿಕ ಜಗತ್ತಿನಲ್ಲಿ ಮೈಸೂರು ಸೈಬರ್ ಹಬ್ ಆಗಿ ಬೆಳೆಯುವಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜು ಪ್ರಮುಖ ಪಾತ್ರವಹಿಸಲಿದೆ ಎಂದು ರಾಜವಂಶಸ್ಥ ಯಧುವೀರದತ್ತ ಚಾಮರಾಜ ಒಡೆಯರು ಅಭಿಪ್ರಾಯ ಪಟ್ಟರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರಾದೇಶಿಕ ಮಟ್ಟದ ತಾಂತ್ರಿಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೈಸೂರು ಅರಸರ ಮನೆತನ ತಂತ್ರಜ್ಞಾನ ಹಾಗೂ ತಾಂತ್ರಿಕತೆಗೆ ಅನೇಕ ಕೊಡುಗೆ, ಪೆÇ್ರೀತ್ಸಾಹಗಳನ್ನು ನೀಡಿವೆ. ಅದಕ್ಕೆ ಉದಾಹರಣೆಯಾಗಿ ಅನೇಕ ಶಿಕ್ಷಣ ಸಂಸ್ಥೆ, ತಂತ್ರಜ್ಞಾನವನ್ನು ಅಂದಿಗೆ ಅಳವಡಿಸಿಕೊಂಡಿದ್ದು ನಮ್ಮ ಕಣ್ಣಮುಂದಿವೆ. ಅಂತೆಯೇ ಸ್ವಾಮಿ ವಿವೇಕಾನಂದರ ತತ್ವ, ಆದರ್ಶವನ್ನು ಮೈಗೂಡಿಸಿಕೊಂಡು ದೇಶ ಹಾಗೂ ಸಮಾಜಕ್ಕೆ ಉತ್ತಮ ಸಾಧನೆಗಳ ಮೂಲಕ ಭವಿಷ್ಯದ ಭಾರತ ರೂಪಿಸುವಲ್ಲಿ ಇಲ್ಲಿನ ಅನೇಕರು ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಸಹ ನೀಡಿದ್ದಾರೆ. ಅದೇ ರೀತಿ ಅಂದಿನ ಇಂಜಿನಿಯರ್ ಆಗಿ ಸರ್.ಎಂ.ವಿ.ವಿಶ್ವೇಶ್ವರಯ್ಯ ಅವರು ಏಷ್ಯಾದಲ್ಲೇ ಮೊಟ್ಟ ಮೊದಲ ವಿದ್ಯುತ್ ಶಕ್ತಿ ಪೂರೈಕೆ ಕೇಂದ್ರ, ಕನ್ನಂಬಾಡಿ ಅಣೆಕಟ್ಟು ಸೇರಿ ಅನೇಕ ಕೊಡುಗೆಗಳನ್ನು ನೀಡುವಲ್ಲಿ ತಮ್ಮ ಅಗಾಧ ಪ್ರತಿಭೆಯನ್ನು ತೋರಿಸಿಕೊಟ್ಟಿದ್ದಾರೆ. ಅವರ ಹೆಸರಿನ ಈ ತಾಂತ್ರಿಕ ಸಂಸ್ಥೆಯಲ್ಲಿ ಕಲಿಯುತ್ತಿರುವ ನೀವೂಗಳು ಸಹ ಸಮಾಜ, ಸೈಬರ್ ಹಾಗೂ ತಾಂತ್ರಿಕ ವಲಯಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮುಖ್ಯ ಹಬ್ ಆಗಿ ವಿಶ್ವವಿದ್ಯಾಲಯ ರೂಪುಗಳಲ್ಲೂ ಇಂತಹ ಕಾರ್ಯಕ್ರಮಗಳು ರೂಪಿತವಾಗುತ್ತಿರುವುದು ಸಂತೋಷದಾಯಕ ಎಂದು ಹೇಳಿದರು.
ಮೈಸೂರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ವಿದ್ಯಾಶಂಕರ್ ಮಾತನಾಡಿ, ಮೈಸೂರು ಮಹಾರಾಜರು ಕಟ್ಟಿದ ಶಿಕ್ಷಣ ಸಂಸ್ಥೆ, ಕೊಡುಗೆಗಳ ಫಲಾನುಭವಿಯಾಗಿ ನಾನು ಈ ಹುದ್ದೆಯಲ್ಲಿದ್ದೇನೆ. ಕಲೆ ಹಾಗೂ ತಂತ್ರಜ್ಞಾನ ಎರಡು ಅಭಿವೃದ್ಧಿಯ ತಳಹದಿಗಳಾಗಿವೆ. ಇವೆರಡಕ್ಕೂ ಮಹಾರಾಜರು ಹಾಗೂ ವಿಶ್ವೇಶ್ವರಯ್ಯ ಅವರು ಬಹುದೊಡ್ಡ ಅಡಿಪಾಯ ಹಾಕಿಕೊಟ್ಟಿದ್ದಾರೆ. ಇವುಗಳನ್ನು ಸ್ಪೂರ್ತಿಯಾಗಿರಿಸಿಕೊಂಡು ನಾವೆಲ್ಲರೂ ಸಾಧನೆಯ ಹಾದಿಯೆಡೆಗೆ ಸಾಗಬೇಕಿದೆ ಎಂದು ಹೇಳಿದರು.
ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದ ಮೊದಲ ದಿನವಾದ ಇಂದು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಂತಾರಾಷ್ಟ್ರೀಯ ಲಯನ್ಸ್ 317ಜೆ ರಾಜ್ಯಪಾಲ ಡಾ.ಎನ್.ಕೃಷ್ಣೇಗೌಡ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಪರಿಷತ್ತಿನ ಸದಸ್ಯ ಡಾ.ಎಂ.ಎಸ್.ಶಿವಕುಮಾರ್, ಡಾ.ಶ್ರೀಸಾನ್ನೇರಾಜ್, ಡಾ.ದಿಲೀಪ್ ಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.