ಸೈಬರ್ ಸುರಕ್ಷಿತ ಮಹಿಳೆ : ರಾಷ್ಟ್ರೀಯ ವಿಚಾರ ಸಂಕಿರಣ

ರಾಯಚೂರು,ಜು.೧೬- ಮೊಬೈಲ್ ಹಾಗೂ ಇಂಟರ್ನೆಟ್ ಆಧಾರಿತ ಇಂದಿನ ಜಗತ್ತಿನಲ್ಲಿ ಮಕ್ಕಳಿಂದ ಹಿಡಿದು ನಿವೃತ್ತಿ ಹೊಂದಿದ ಹಿರಿಯ ನಾಗರೀಕರವರೆಗೆ ಎಲ್ಲರೂ ಸೈಬರ್ ಅಪರಾಧಗಳಿಗೆ ಬಲಿಪಶುಗಳಾಗುತ್ತಿದ್ದಾರೆ.
ಆನ್ಲೈನ್ ಪ್ರಪಂಚ ಬಹುತೇಕ ಎಲ್ಲರಿಗೂ ಅಸುರಕ್ಷಿತವಾಗಿದ್ದು, ಅಲ್ಲಾಗುವ ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ಮತ್ತು ಜಾಗೃತಿಯನ್ನು ಬೆಳೆಸಿಕೊಳ್ಳುವುದೇ ನಾವು ಅವುಗಳಿಂದ ಪಾರಾಗಲು ಇರುವ ಉಪಾಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ನಿಖಿಲ್.ಬಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣಕ ವಿಜ್ಞಾನ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆಯ ಕೋಶದ(ಐಕ್ಯುಎಸಿ) ವತಿಯಿಂದ ಹಮ್ಮಿಕೊಂಡಿದ್ದ ’ಸೈಬರ್ ಸುರಕ್ಷಿತ ಮಹಿಳೆ ಹಾಗೂ ಸೈಬರ್ ಸುರಕ್ಷಿತ ಜೀವನ’ ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಕಾಲದ ವಿದ್ಯಾರ್ಥಿನಿಯರು ಅಥವಾ ಮಹಿಳೆಯರು ಮೊಬೈಲ್ ಕರೆ, ಎಸ್‌ಎಮ್‌ಎಸ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಕ್ಕೆ ಬರುವ ಅಪರಿಚಿತ ವ್ಯಕ್ತಿಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಪರಿಚಯಸ್ಥರಲ್ಲದವರು ಮಾಡುವ ಕರೆ ಅಥವಾ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು.
ವ್ಯಕ್ತಿ ಯಾರು, ಏನು ಎಂಬ ಖಚಿತ ಅಥವಾ ಸ್ಪಷ್ಟತೆ ಇಲ್ಲದೇ ಬೆಳೆಯುವ ಸಂವಹನ ಸಂಪರ್ಕ ಹಾಗೂ ಸ್ನೇಹಗಳಿಂದ ಅನಾಹುತಗಳಾಗುವುದೇ ಹೆಚ್ಚು. ಅಂತಹ ವ್ಯಕ್ತಿಗಳು ನಮ್ಮಿಂದ ಖಾಸಗಿ ವಿಚಾರಗಳನ್ನು ತಿಳಿದುಕೊಂಡು, ನಂತರ ಅದನ್ನೇ ಬಂಡವಾಳ ಮಾಡಿಕೊಂಡು, ಬ್ಲಾಕ್‌ಮೈಲ್ ಮಾಡಿ ಹಣಕ್ಕಾಗಿ ಬೇಡಿಕೆ ಇಡಬಹುದು ಅಥವಾ ಲೈಂಗಿಕ ಶೋಷಣೆ ಮಾಡಬಹುದು. ಹಾಗಾಗಿ ಮಹಿಳೆಯರು ಈ ಎಲ್ಲಾ ವಿಚಾರಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ಕಿವಿಮಾತು ಹೇಳಿದರು.
ಸಾಮಾಜಿಕ ಜಾಲತಾಣಗಳನ್ನು ಬಳಸುವ ಮಹಿಳೆಯರು ತಮ್ಮ ಫೋಟೋಗಳನ್ನು ಶೇರ್ ಮಾಡುವಾಗ ಹೆಚ್ಚು ಜಾಗೃತಿಯಿಂದಿರಬೇಕು. ನಾವು ಹಂಚಿಕೊಳ್ಳುವ ಫೋಟೋಗಳು ಅಪರಿಚಿತ ವ್ಯಕ್ತಿಗಳ ಕೈಗೆ ಸಿಗುವಂತಿದ್ದರೆ, ಫೋಟೋ ಮಾರ್ಫಿಂಗ್(ಫೋಟೋ ಎಡಿಟ್ ಮಾಡಿ, ಮುಖ ಮತ್ತು ದೇಹ ಅದಲುಬದಲು ಮಾಡುವುದು) ಸೇರಿದಂತೆ ಫೇಕ್ ಪ್ರೊಫೈಲ್ ಕ್ರಿಯೇಶನ್ನಂತಹ ಸೈಬರ್ ಕೃತ್ಯಗಳಿಗೆ ಬಲಿಯಾಗುವ ಸಾಧ್ಯತೆ ಇರುತ್ತದೆ.
ಇಂತಹ ಕೃತ್ಯಗಳನ್ನು ಎಸಗುವವರು ನಮ್ಮಿಂದ ಅಥವಾ ನಮ್ಮ ಕುಟುಂಬದವರಿಂದ ಹಣ ವಸೂಲಿಗೆ ಇಳಿಯಬಹುದು ಅಥವಾ ನಮ್ಮ ಮಾನಕ್ಕೆ ಧಕ್ಕೆ ಮಾಡಬಹುದು. ಅದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಆದಷ್ಟು ಎಚ್ಚರಿಕೆಯಿಂದಿರಬೇಕು. ನಾವು ಹಂಚಿಕೊಳ್ಳುವ ಫೋಟೋ ಅಥವಾ ಸಂದೇಶಗಳು ಪರಿಚಿತರಿಗೆ ಮಾತ್ರ ತಲುಪುವ ರೀತಿಯಲ್ಲಿ ಸೆಟಿಂಗ್ ಮಾಡಿಕೊಳ್ಳಬೇಕು ಇಲ್ಲ ಪ್ರೊಫೈಲ್ ಲಾಕ್ ಮಾಡಿಕೊಳ್ಳಬೇಕು. ಯಾರೇ ಆಗಲಿ ತುರ್ತು ಸಂದರ್ಭಗಳಲ್ಲಿ ೧೧೨ ಸಂಖ್ಯೆ ಡಯಲ್ ಮಾಡಬಹುದು ಹಾಗೇ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ದೂರುಗಳಿದ್ದರೆ ೧೯೩೦ ಸಂಖ್ಯೆಗೆ ಕರೆ ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಯಂಕಣ್ಣ ಮಾತನಾಡಿ, ಇಂದಿನ ಯುವಜನತೆಯಲ್ಲಿ ಮೊಬೈಲ್ ಬಗ್ಗೆ ತುಂಬಾ ಕ್ರೇಜ್ ಇದೆ. ಇಂಟರ್ನೆಟ್ ಬಳಕೆ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ಯುವಕ, ಯುವತಿಯರು ಸಕ್ರೀಯರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ತಿಳಿದೋ, ತಿಳಿಯದೆಯೋ ಸೈಬರ್ ಅಪರಾಧಿಗಳ ಜಾಲಕ್ಕೆ ಸಿಲುಕಿ ಅನೇಕರು ತಾವು ತೊಂದರೆ ಅನುಭವಿಸುವುದಲ್ಲದೇ ತಮ್ಮ ಕುಟುಂಬಕ್ಕೂ ಮುಜುಗರವನ್ನುಂಟುಮಾಡುತ್ತಾರೆ.
ಇಂತಹ ಅಪರಾಧಗಳಿಗೆ ಬಲಿಪಶುಗಳಾದವರು ಆದ ಎಡವಟ್ಟು ಅಥವಾ ತಪ್ಪಿನಿಂದ ಹೊರಬರಲಾಗದೇ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೂ ಸಾಕಷ್ಟಿವೆ. ಹಾಗಾಗಿ ಯುವಜನತೆ ಇದರ ಬಗ್ಗೆಯೂ ಜಾಗೃತಿ ಬೆಳೆಸಿಕೊಳ್ಳಬೇಕು ಜೊತೆಗೆ ತಮ್ಮ ಕುಟುಂಬದವರಿಗೂ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಅವರು ಹೊಸದಾಗಿ ನಿರ್ಮಾಣವಾಗಿರುವ ಗಣಕಯಂತ್ರ ಪ್ರಯೋಗಾಲಯ, ವಿಜ್ಞಾನ ವಿಭಾಗದ ಕೊಠಡಿಗಳನ್ನು ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜರ್ ಸಿದ್ದನಗೌಡ ಪಾಟೀಲ್ ಹಾಗೂ ಜಾಗೃತಿ ಸಂದೇಶಕರಾದ ರೂಪ.ಎಸ್ ಅವರು ಆನ್ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ನೀಡಿದರು, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಬಸವಪ್ರಸಾದ್.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಹಿರಿಯ ಪ್ರಾಧ್ಯಾಪಕರಾದ ಮಲ್ಲನಗೌಡ.ಆರ್, ಐಕ್ಯುಎಸಿ ಸಂಚಾಲಕ ಮಹಾಂತೇಶ್ ಅಂಗಡಿ, ಇಶ್ರತ್ ಬೇಗಂ, ಡಾ. ಜೆ.ಎಲ್.ಈರಣ್ಣ ವೇದಿಕೆ ಮೇಲೆ ಉಪಸ್ಥಿತರಿದ್ದರು, ಉಪನ್ಯಾಸಕರಾದ ಸೈಯ್ ಮಿನಾಜ್ ಉಲ್ ಹಸನ್, ವಿಜಯ್ ಸರೋದೆ ಸೇರಿದಂತೆ ಗಣಕ ವಿಜ್ಞಾನ ವಿಭಾಗದ ಎಲ್ಲಾ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.