ಸೈಬರ್ ಕ್ರೈಂ ಹೆಚ್ಚಳ ಸಚಿವ ಜ್ಞಾನೇಂದ್ರ ಕಳವಳ

ಧರ್ಮಸ್ಥಳ, ನ.೧೦- ಕರಾವಳಿ ಮೂಲಕ ವಿದೇಶಿಯರು ಅಕ್ರಮ ಪ್ರವೇಶ ತಡೆಗಟ್ಟಲು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ೩೦ ಬೋಟ್‌ಗಳನ್ನು ಖರೀದಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಅವರು ಧರ್ಮಸ್ಥಳದಲ್ಲಿ ಎರಡು ಕೋಟಿ ೩೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು. ಸ್ಯಾಟ್‌ಲೈಟ್ ಫೋನ್‌ಗಳ ಬಳಕೆ ಕರಾವಳಿಯಲ್ಲಿ ಸ್ವಲ್ಪ ಜಾಸ್ತಿಯಾಗಿದೆ. ಕೇಂದ್ರದ ಪಡೆ ನಮ್ಮ ಪೊಲೀಸರ ಜೊತೆ ಸಂಪರ್ಕ ಇಟ್ಟುಕೊಂಡು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸೈಬರ್ ಕ್ರೈಂ ಹೆಚ್ಚಳವಾಗುತ್ತಿದ್ದು, ಈ ವಿಭಾಗವನ್ನು ಗಟ್ಟಿಗೊಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಅಪರಾಧ ಪತ್ತೆ ಘಟಕಗಳನ್ನು ಪ್ರಾರಂಭಿಸಲಾಗುವುದು ಎಂದರು.
ಈ ವೇಳೆ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಬದುಕು ಮತ್ತು ಬದುಕಲು ಬಿಡು ಎಂಬ ತತ್ವದ ನೆಲೆಯಲ್ಲಿ ಧರ್ಮ ರಕ್ಷಣೆಯೊಂದಿಗೆ ಶಾಂತಿ ಸುಭೀಕ್ಷೆ ಕಾಪಾಡಲು ದಂಡಾಧಿಕಾರಿಗಳಾದ ಪೊಲೀಸರು ಉತ್ತಮ ಸೇವೆ ನೀಡುತ್ತಿದ್ದಾರೆ. ಆದಷ್ಟು ಬೇಗ ಪೊಲೀಸ್ ಠಾಣಾ ಕಟ್ಟಡ ಪೂರ್ಣಗೊಳ್ಳಲೆಂದು ಶುಭ ಹಾರೈಸಿದರು. ಶಾಸಕ ಹರೀಶ್ ಪೂಂಜಾ ಮಾತನಾಡಿ, ಹೊರಠಾಣೆಯಾಗಿದ್ದ ಧರ್ಮಸ್ಥಳ ೨೦೧೬ರಲ್ಲಿ ಠಾಣೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದೀಗ ಬಾಡಿಗೆ ಕಟ್ಟಡದಲ್ಲಿದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಈಗಿನ ಸಿಎಂ ಬೊಮ್ಮಾಯಿಯವರ ಮುತುವರ್ಜಿಯಿಂದ ೨.೩೦ ಕೋ.ರೂ. ಅನುದಾನ ಬಿಡುಗಡೆಯಾಗಿದೆ. ಇನ್ನು ೧.೫೦ ಕೋಟಿ ರೂ. ಹೆಚ್ಚುವರಿಯಾಗಿ ಬೇಕು. ಅಲ್ಲದೆ ಇಲ್ಲಿನ ಠಾಣೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಹಾಗೂ ವೃತ್ತ ನಿರೀಕ್ಷಕ ಠಾಣೆಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಕರ್ಯ ಮುಖ್ಯ ಅಭಿಯಂತರ ಎನ್‌ಜಿ ಗೌಡಯ್ಯ, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಜಯಾ ಮೋನಪ್ಪ ಗೌಡ, ಬಂಟ್ವಾಳ ಎಎಸ್‌ಪಿ ಶಿಮಾಂಶು ರಜಪೂತ್ ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಾವಣೆ ಋಷಿಕೇಶ್ ಭಗವಾನ್ ಸ್ವಾಗತಿಸಿದರು. ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ವಂದಿಸಿದರು. ಧರ್ಮಸ್ಥಳ ಗ್ರಾ.ಪಂ. ಸದಸ್ಯ ಶ್ರೀನಿವಾಸ ರಾವ್ ನಿರೂಪಿಸಿದರು.