ಸೈಬರ್ ಅಪರಾಧ: ಕರ್ನಾಟಕಕ್ಕೆ ೨ನೇ ಸ್ಥಾನ, ಬೆಂಗಳೂರು ಮೊದಲು

ಬೆಂಗಳೂರು,ಡಿ.೮- ದೇಶದಲ್ಲಿ ದಾಖಲಾಗುವ ಸೈಬರ್ ಅಪರಾಧಗಳ ಪಟ್ಟಿಯಲ್ಲಿ ಕರ್ನಾಟಕ ೨ನೇ ಸ್ಥಾನ ಹಾಗೂ ಮಹಾನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದ ಕುಖ್ಯಾತಿಗೆ ಪಾತ್ರವಾಗಿದೆ.
ದೇಶದಲ್ಲಿ ಕಳೆದ ೨೦೨೧ರಲ್ಲಿ ೫೨,೯೭೪ ಸೈಬರ್ ಪ್ರಕರಣಗಳು ದಾಖಲಾಗಿದ್ದರೆ, ೨೦೨೨ರಲ್ಲಿ ೬೫,೮೯೩ ಕೇಸ್ ದಾಖಲಾಗಿದ್ದು, ಅವುಗಳಲ್ಲಿ ಕರ್ನಾಟಕ ೨ನೇ ಸ್ಥಾನ ಹಾಗೂ ಮಹಾನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ.
ಕಳೆದ ೨೦೨೨ನೇ ಸಾಲಿನಲ್ಲಿ ತೆಲಂಗಾಣದಲ್ಲಿ ೧೫,೨೯೭ ಕೇಸ್‌ಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. ೧೨,೫೫೬ ಪ್ರಕರಣಗಳು ದಾಖಲಾಗಿರುವ ಕರ್ನಾಟಕ ಮತ್ತು ೧೦,೧೧೭ ಪ್ರಕರಣಗಳನ್ನು ದಾಖಲಾಗಿರುವ ಉತ್ತರ ಪ್ರದೇಶ ರಾಜ್ಯಗಳು ಕ್ರಮವಾಗಿ ೨ ಮತ್ತು ೩ನೇ ಸ್ಥಾನದಲ್ಲಿವೆ.
ಸೈಬರ್ ಅಪರಾಧಗಳಷ್ಟೇ ಅಲ್ಲದೇ ಶೇ.೧೧ರಷ್ಟು ಆರ್ಥಿಕ ಅಪರಾಧ ಪ್ರಕರಣಗಳು, ಶೇ. ೯ರಷ್ಟು ಹಿರಿಯ ನಾಗರಿಕರ ವಿರುದ್ಧದ ಅಪರಾಧ ಪ್ರಕರಣಗಳು, ಶೇ.೪ರಷ್ಟು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚಳವಾಗಿರುವ ಮಾಹಿತಿಯನ್ನು ಇತ್ತೀಚೆಗೆ ಬಿಡುಗಡೆಯಾಗಿರುವ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ವರದಿ ಬಹಿರಂಗಗೊಳಿಸಿದೆ.
ಬೆಂಗಳೂರಿನಲ್ಲಿ ಹೆಚ್ಚು:
ದೇಶದ ಮಹಾನಗರಗಳಲ್ಲಿ ದಾಖಲಾದ ಸೈಬರ್ ಅಪರಾಧ ಪ್ರಕರಣಗಳ ಪೈಕಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ೨೦೨೧ರಲ್ಲಿ ೬,೪೨೩ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, ೨೦೨೨ರಲ್ಲಿ ೯,೯೪೦ ಪ್ರಕರಣಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. ೪೭೨೪ ಪ್ರಕರಣಗಳು ದಾಖಲಾಗಿರುವ ಮುಂಬೈ ಮತ್ತು ೪೪೩೬ ಪ್ರಕರಣಗಳು ದಾಖಲಾಗಿರುವ ಹೈದರಾಬಾದ್ ೨ ಮತ್ತು ೩ನೇ ಸ್ಥಾನದಲ್ಲಿವೆ.
ಮಕ್ಕಳ ಮೇಲಿನ ಸೈಬರ್ ಅಪರಾಧ ಪ್ರಕರಣಗಳಲ್ಲಿಯೂ ಕರ್ನಾಟಕ ಮೊದಲನೇ ಸ್ಥಾನ ಪಡೆದ ಕುಖ್ಯಾತಿಗೊಳಗಾಗಿದೆ. ೨೦೨೨ನೇ ಸಾಲಿನಲ್ಲಿ ಮಕ್ಕಳನ್ನೊಳಗೊಂಡ ಅಶ್ಲೀಲ ವಿಡಿಯೋಗಳ ಚಿತ್ರೀಕರಣ ಹಾಗೂ ಪ್ರಕಟಿಸುವ ಅಪರಾಧ ಸೇರಿದಂತೆ ಮಕ್ಕಳ ಮೇಲಿನ ೨೩೯ ಸೈಬರ್ ಅಪರಾಧ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿವೆ. ತಲಾ ೧೮೨ ಪ್ರಕರಣಗಳನ್ನು ಹೊಂದಿರುವ ಕೇರಳ ಹಾಗೂ ರಾಜಸ್ಥಾನ ಎರಡನೇ ಸ್ಥಾನದಲ್ಲಿದ್ದರೆ, ೧೭೮ ಪ್ರಕರಣಗಳಿರುವ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ.
ಪೊಲೀಸರು ಹಿಂದೆ:
ಮತ್ತೊಂದೆಡೆ, ಸೈಬರ್ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕರ್ನಾಟಕ ಪೊಲೀಸರು ಹಿಂದೆ ಬಿದ್ದಿದ್ದಾರೆ. ೨೦೨೨ರಲ್ಲಿ ದಾಖಲಾದ ೧೨,೫೫೬ ಪ್ರಕರಣಗಳ ಪೈಕಿ ೬೧೨ ಪುರುಷರು ಹಾಗೂ ೬೭ ಮಹಿಳೆಯರು ಸೇರಿ ೬೭೯ ವಂಚಕರನ್ನಷ್ಟೇ ಬಂಧಿಸುವಲ್ಲಿ ಕರ್ನಾಟಕದ ಪೊಲೀಸರು ಯಶಸ್ವಿಯಾಗಿದ್ದಾರೆ. ೧೦,೧೧೭ ಪ್ರಕರಣಗಳಿಂದ ೭೧೦೭ ಪುರುಷ ಹಾಗೂ ೧೫ ಮಹಿಳೆಯರು ಸೇರಿ ೭,೧೨೨ ಆರೋಪಿಗಳನ್ನು ಪತ್ತೆ ಹಚ್ಚಿರುವ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ.
ದೇಶದ ಮಹಾನಗರಗಳ ಪೈಕಿ ಬೆಂಗಳೂರು ನಗರ ಐಟಿ ಹಬ್ ಎಂದು ಹೆಸರುವಾಸಿಯಾಗಿದೆ. ಇಲ್ಲಿ ತಂತ್ರಜ್ಞಾನ ಆಧಾರಿತ ಕೆಲಸಗಳು ಹೆಚ್ಚಿರುವುದರಿಂದ ಸಹಜವಾಗಿಯೇ ಬೆಂಗಳೂರು ಸೈಬರ್ ವಂಚಕರ ಟಾರ್ಗೆಟ್ ಆಗಿದೆ. ಪ್ರತಿನಿತ್ಯದ ಕೆಲಸಗಳಿಗೂ ಜನರು ಆಪ್‌ಗಳನ್ನು ಅವಲಂಬಿಸಿರುವುದು ಇದಕ್ಕೆ ಕಾರಣ. ತಂತ್ರಜ್ಞಾನಗಳ ಹೆಚ್ಚಿನ ಬಳಕೆಯನ್ನು ನಾವು ಬೆಂಗಳೂರಿನಲ್ಲಿ ಕಾಣುತ್ತೇವೆ. ಹಾಗಾಗಿ ಸೈಬರ್ ವಂಚನೆಗಳೆಂದು ಬಂದಾಗ ಅವುಗಳಿಂದ ವಂಚನೆಗೊಳಗಾಗುವ ಅತಿ ಹೆಚ್ಚು ಜನರು ಬೆಂಗಳೂರಿನಲ್ಲಿ ಸಿಗುತ್ತಿದ್ದಾರೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ ಬಿಡುಗಡೆಗೊಳಿಸಿರುವ ಮಾಹಿತಿಗೂ ಸಿಗದ ಅನೇಕ ಪ್ರಕರಣಗಳಿವೆ. ಎಷ್ಟೋ ಪ್ರಕರಣಗಳು ವರದಿಯಾಗುವುದೇ ಇಲ್ಲ. ಸೈಬರ್ ಕ್ರೈಂ ಕುರಿತು ಜನರಲ್ಲಿ ನಿರಂತರ ಜಾಗೃತಿ ಮೂಡಿಸುವ ಅಗತ್ಯವಿದೆ” ಎಂದು ಸೈಬರ್ ತಜ್ಞ ಫಣೀಂದ್ರ ಬಿ.ಎನ್. ಹೇಳುತ್ತಾರೆ.

೨೦೨೨ ಪ್ರಕರಣಗಳು:
ತೆಲಂಗಾಣ – ೧೫,೨೯೭
ಕರ್ನಾಟಕ – ೧೨,೫೫೬
ಉತ್ತರ ಪ್ರದೇಶ – ೧೦,೧೧೭
ಮಹಾರಾಷ್ಟ್ರ – ೮,೨೪೯
ಆಂಧ್ರಪ್ರದೇಶ – ೨,೩೪೧
೨೦೨೨ರ ಹೆಚ್ಚು ಸೈಬರ್ ಕೇಸ್ :
ಬೆಂಗಳೂರು – ೯,೯೪೦
ಮುಂಬೈ – ೪೭೨೪
ಹೈದರಾಬಾದ್ – ೪೪೩೬
ಲಕ್ನೋ – ೧೧೩೪
ದೆಹಲಿ – ೬೮೫